ಕಳಸ:ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಎದುರು ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ದಿ.ನರಸಮ್ಮ ವೆಂಕಟಸುಬ್ಬಾಜೋಯಿಸ್ ದಂಪತಿಗಳ ಕಂಚಿನ ಪುತ್ಥಳಿಯ ಅನಾವರಣ ಇದೇ 8ರಂದು ನಡೆಯಲಿದೆ.
1973ರಲ್ಲಿ ಅನಪೂರ್ಣೇಶ್ವರಿಯ ಪುನರ್ ಪ್ರತಿಷ್ಟೆ ಮತ್ತು ಆದಿಶಕ್ತಿಯ ಪ್ರತಿಷ್ಟೆ ನಡೆಸಿದ್ದ ವೆಂಕಟಸುಬ್ಬಾಜೋಯಿಸರು ಕುಗ್ರಾಮವಾಗಿದ್ದ ಹೊರನಾಡನ್ನು ಪಾವನ ಪುಣ್ಯಕ್ಷೇತ್ರವನ್ನಾಗಿ ಮಾಡಿದರು.ಅವರ ಸವಿನೆನಪು ಶಾಶ್ವತವಾಗಿ ಇರಬೇಕು ಎಂಬ ಕಾರಣಕ್ಕೆ ದೇವಸ್ಥಾನದ ಮುಖ ಮಂಟಪದ ಎದುರು ಕಂಚಿನ ಪುತ್ಥಳಿ ಅನಾವರಣ ಮಾಡಲಾಗುತ್ತಿದೆ ಎಂದು ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಸೋಮವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು,ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಬೆಳಿಗ್ಗೆ 11 ಗಂಟೆಗೆ ಪುತ್ಥಳಿ ಅನಾವರಣ ಮಾಡಲಿದ್ದಾರೆ.ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅರ್ಚಕರ ನಿವಾಸಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.ಹರಿಹರಪುರದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಅನ್ನಪೂರ್ಣಾ ಪಾದಸೇವಾದುರಂಧರ ಪುಸ್ತಕವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದಾರೆ. ಬಿ.ಎಲ್.ಶಂಕರ್ ದಿ. ವೆಂಕಟಸುಬ್ಬಾಜೋಯಿಸರಿಗೆ ನುಡಿನಮನ ಸಲ್ಲಿಸಲಿದ್ದಾರೆ. ಮುಖಂಡರಾದ ಬಿ.ಎಲ್. ಸಂತೋಷ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ನಯನಾ ಮೋಟಮ್ಮ, ಪತ್ರಿಕಾ ಸಂಪಾದಕ ವಿಶ್ವಶ್ವರ ಭಟ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯಪಾರಿಗೆ ಹೆಚ್ಚುವರಿ ಭದ್ರತೆ ಇರುವುದರಿಂದ ಬೆಳಿಗ್ಗೆ 9.30ರ ನಂತರ ಯಾವ ಭಕ್ತರಿಗೂ ದೇವಸ್ಥಾನದ ಒಳಗೆ ಪ್ರವೇಶಿರುವುದಿಲ್ಲ. ಮಧ್ಯಾಹ್ನ 1 ಗಂಟೆಯಿಂದ ಎಂದಿನಂತೆ ದೇವರ ದರ್ಶನ ಪಡೆಯಬಹುದು.ಆಹ್ವಾನಿತರು ಕೂಡ ಸೂಕ್ತ ಬ್ಯಾಡ್ಜ್, ಪಾಸ್ ಪಡೆದು ಕಾರ್ಯಕ್ರಮಕ್ಕೆ ಬರಬೇಕು ಎಂದೂ ಭೀಮೇಶ್ಚರ ಜೋಷಿ ಕೋರಿದ್ದಾರೆ.
