ಕಳಸ:ಜನರ ಹೋರಾಟದ ಫಲವಾಗಿ ಸಂಸೆ ಗ್ರಾಮ ಪಂಚಾಯಿತಿಯು ಕುದುರೆಮುಖ ಸಮೀಪದ ಜಾಂಬಳೆ ಪ್ರದೇಶದಲ್ಲಿ ಕಸ ಸುರಿಯುತ್ತಿದ್ದುದನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.
ಸಂಸೆ ಪಂಚಾಯಿತಿಯು ಕಳೆದ ವರ್ಷದಿಂದ ಜಾಂಬಳೆಯಲ್ಲಿ ಕಸ ಸುರಿಯುತ್ತಿದ್ದರ ಬಗ್ಗೆ ಸ್ಥಳೀಯರು ಅಪಸ್ವರ ಎತ್ತಿದ್ದರು. ಈ ಪ್ರದೇಶದಲ್ಲಿ ಕಸ ಸುರಿಯುವುದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

‘ವಾಯ್ಸ್ ಆಫ್ ಕಳಸ’ ಕೂಡ ಕಳೆದ ವಾರ ಈ ಬಗ್ಗೆ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯ ಕುದುರೆಮುಖ ವಲಯ ಅರಣ್ಯಾಧಿಕಾರಿ ಚೇತನ್ ಸಂಸೆ ಪಂಚಾಯಿತಿಯು ಜಾಂಬಳೆಯ ಅರಣ್ಯ ಪ್ರದೇಶದಲ್ಲಿ ಕಸ ಸುರಿಯದಂತೆ ತಾಕೀತು ಮಾಡಿದ್ದಾರೆ.
ಸಂಸೆ ಪಂಚಾಯಿತಿಗೆ ಜಾಂಬಳೆ, ನೆಲ್ಲಿಬೀಡು ಗ್ರಾಮಸ್ಥರು ಕೂಡ ಮನವಿ ಸಲ್ಲಿಸಿ ಕಸ ಸುರಿಯದಂತೆ ಆಗ್ರಹಿಸಿದ್ದರು. ಕಸ ಸುರಿಯುತ್ತಿರುವುದರಿಂದ ಗ್ರಾಮದಲ್ಲಿ ನೈರ್ಮಲ್ಯದ ಸಮಸ್ಯೆ ಮತ್ತು ಅನಾರೋಗ್ಯ ಹೆಚ್ಚುತ್ತಿದೆ ಎಂದು ಬೊಟ್ಟು ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಂಸೆ ಪಂಚಾಯಿತಿ ಜಾಂಬಳೆಯಲ್ಲಿ ಈವರೆಗೆ ಸುರಿದಿದ್ದ ಕಸವನ್ನು ವಿಲೇವಾರಿ ಮಾಡಿ ಜಾಗವನ್ನು ಶುಚಿ ಮಾಡಿತು.
