ರವಿ ಕೆಳಂಗಡಿ
ಕಳಸ:ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಮಾಡಿದ ನಂತರ ಪ್ರವಾಸಿಗರು ಶೃಂಗೇರಿ ತಲುಪಲು ಗೂಗಲ್ ಮ್ಯಾಪ್ ಮೊರೆ ಹೋಗುತ್ತಾರೆ.ಆಗ ಹೊರನಾಡು-ಬಲಿಗೆ-ಮೆಣಸಿನಹಾಡ್ಯ ಮೂಲಕ ಶೃಂಗೇರಿ ತಲುಪುವ ಅತ್ಯಂತ ಸನಿಹದ ರಸ್ತೆಯನ್ನು ಗೂಗಲ್ ಸಲಹೆ ಮಾಡುತ್ತದೆ.
ಸಮಯ ಮತ್ತು ಡೀಸೆಲ್ ಉಳಿಸುವ ಉದ್ದೇಶದಿಂದ ಪ್ರವಾಸಿಗರು ಮೆಣಸಿನಹಾಡ್ಯ ಹಾದಿ ಆಯ್ದುಕೊಳ್ಳುತ್ತಾರೆ.ಹೊರನಾಡಿನಿಂದ ಏರು ಹಾದಿಯಲ್ಲಿ ಸಾಗಿ ಬಲಿಗೆ ಗ್ರಾಮದ ಕಡೆಗೆ ಪ್ರವಾಸಿ ವಾಹನಗಳು ಹೊರಡುತ್ತವೆ.ಹೊರನಾಡು-ಬಲಿಗೆ ರಸ್ತೆ ಉತ್ತಮ ಸ್ಥಿತಿಯಲ್ಲಿದೆ.ಆದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ 4-5 ತಿರುವುಗಳಲ್ಲಿ ಅತ್ಯಂತ ಏರುಹಾದಿಯೆ ಇದೆ.
ಈ ಏರುಹಾದಿಯಲ್ಲಿ ವಾಹನಗಳು ಹತ್ತಲು ಪ್ರಯಾಸ ಪಡುತ್ತವೆ. ಬಲಿಗೆ ರಸ್ತೆಯಲ್ಲಿ ಎಷ್ಟೋ ಪ್ರವಾಸಿ ವಾಹನಗಳು ಜನರನ್ನು ಇಳಿಸಿ ಮುಂದಕ್ಕೆ ಸಾಗುತ್ತವೆ.ಪ್ರಯಾಸಪಟ್ಟು ಬಲಿಗೆ ಗ್ರಾಮ ತಲುಪಿದ ನಂತರ ಮೆಣಸಿನಹಾಡ್ಯದವರೆಗೂ ಇಳಿಜಾರಾದ ಹಾದಿ.ಅದನ್ನು ಕ್ರಮಿಸುವಾಗ 2 ಕಡಿದಾದ ಸೇತುವೆಗಳು ಚಾಲಕರ ಕೌಶಲ್ಯಕ್ಕೆ ಸವಾಲು ಹಾಕುತ್ತವೆ. ಒಂದು ಸೇತುವೆಯ ಬದಿ ಯಾವುದೇ ಸುರಕ್ಷತಾ ತಡೆಗೋಡೆ ಇಲ್ಲ.

ಈ ಸೇತುವೆ ಮೇಲೆ ಮಳೆಗಾಲದಲ್ಲಿ ನೀರು ಹರಿಯುತ್ತದೆ.ಪ್ರವಾಸಿಗರು ಮಳೆಗಾಲದಲ್ಲಿ ಭಯದಿಂದಲೇ ಈ ಸೇತುವೆ ದಾಟಿಸುತ್ತಾರೆ.ಇನ್ನೊಂದು ಸೇತುವೆಯಲ್ಲಿ ಒಂದು ವಾಹನ ಮಾತ್ರ ಸಾಗುವಷ್ಟು ಜಾಗ ಇದೆ.ಜೊತೆಗೆ ಕಡಿದಾದ ತಿರುವಿನಲ್ಲೇ ಸೇತುವೆ ಇದೆ.ಇದರಿಂದ ಅನೇಕ ವಾಹನಗಳು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆಯುತ್ತವೆ.
ಶುಕ್ರವಾರದಿಂದ ಭಾನುವಾರದವರೆಗೆ ಹೊರನಾಡಿನಿಂದ ಸಾವಿರಾರು ಪ್ರವಾಸಿ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತವೆ.ಇತ್ತೀಚೆಗೆ ಎರಡು ಬಸ್ಗಳು ಈ ಕಡಿದಾದ ಇಳಿಜಾರಿನಲ್ಲಿ ಪಲ್ಟಿ ಆಗಿವೆ. ಮೆಣಸಿನಹಾಡ್ಯದ ಬಳಿ ಸುಮಾರು ಒಂದು ಕಿ.ಮೀ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಇಲ್ಲಿ ಜಲ್ಲಿ ಕಿತ್ತು ಬಂದಿದ್ದು ವಾಹನ ಸಂಚಾರವೇ ದುಸ್ಸಾಧ್ಯ ಎಂಬಂತಾಗಿದೆ.
‘ನಾವು ವರ್ಷಕ್ಕೆ 3 ಬಾರಿ ಹೊರನಾಡಿಗೆ ಬರುತ್ತೇವೆ. ಅಲ್ಲಿಂದ ಶೃಂಗೇರಿಗೆ ಮೆಣಸಿನಹಾಡ್ಯ ಮೂಲಕ ಹೋದರೆ ಬಹಳ ಹತ್ತಿರದ ಹಾದಿ. ಸಮಯವೂ ಉಳಿಯುತ್ತದೆ. ಆದರೆ ಈ ರಸ್ತೆ ದುಸ್ಥಿತಿಯಿಂದ ವಾಹನಗಳಿಗೆ ಭಾರಿ ಹಾನಿ ಆಗುತ್ತಿದೆ’ ಎಂದು ಬೆಂಗಳೂರಿನ ಪ್ರವಾಸಿ ಮಂಜುನಾಥ್ ಹೇಳಿದರು.
ಮೆಣಸಿಹಾಡ್ಯದ ಬಳಿ ಶಿಥಿಲವಾಗಿರುವ ಮುಳುಗುಸೇತುವೆ ಬದಲು ಪಕ್ಕದಲ್ಲೇ ಶಾಶ್ವತ ಸೇತುವೆ ನಿರ್ಮಿಸುವ ಎಲ್ಲ ಅವಕಾಶ ಇದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ಮೆಣಸಿನಹಾಡ್ಯ ಗ್ರಾಮಸ್ಥರು ಆಗ್ರಹಿಸುತ್ತಾರೆ.
