ಕಳಸ:ಕನ್ನಡ ಜಾನಪದ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಪಟ್ಟಣದಲ್ಲಿ ಇತ್ತೀಚೆಗೆ ನಡೆಯಿತು.
ಸಾಯಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಾಲಾಜಿ, ಜಿಲ್ಲಾ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್, ಹೊರನಾಡಿನ ಜಿ.ರಾಜಗೋಪಾಲ ಜೋಷಿ, ನೂತನ ಅಧ್ಯಕ್ಷ ಅಜಿತ್ ಪ್ರಸಾದ್ ಅವರಿಗೆ ನೇಗಿಲು, ಪ್ರಮಾಣಪತ್ರ ಹಸ್ತಾಂತರಿಸಿ ಪದಗ್ರಹಣದ ವಿಧಿ ನೆರವೇರಿಸಿದರು.

ಇದಕ್ಕೂ ಮುನ್ನ ಸಾಯಿ ಮಂದಿರದಲ್ಲಿ ಅನೇಕ ಜಾನಪದ ವಸ್ತುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಅತಿಥಿಗಳನ್ನು ಜಾನಪದ ನೃತ್ಯದ ಮೂಲಕ ಮಕ್ಕಳು ವೇದಿಕೆಗೆ ಬರಮಾಡಿಕೊಂಡರು. ಅತಿಥಿಗಳಿಗೆ ಅಡಿಕೆಯ ಮಂಡಾಳೆ ತೊಡಿಸಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಕಳಸದ ಕವಿ, ಲೇಖಕ ಪ್ರೇಮ್ ಕುಮಾರ್ ಅವರ ಸಣ್ಣ ಕಥೆ ಸಂಕಲನ ಮೂಡಲ ಮೌನ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಉಪತಹಶೀಲ್ದಾರ್ ಸುಧಾ, ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್, ಇತಿಹಾಸ ಸಂಶೋಧಕ ಹೆಚ್.ಆರ್.ಪಾಂಡುರಂಗ ಭಾಗವಹಿಸಿದ್ದರು.
ಕಳಸ ಘಟಕದ ಉಪಾಧ್ಯಕ್ಷರಾಗಿ ಕೆ.ಕೆ.ವಿನಾಯಕ್, ಕಾರ್ಯದರ್ಶಿಯಾಗಿ ಭರತ್ರಾಜ್, ಖಜಾಂಚಿಯಾಗಿ ಅಂಕಿತ ಅರೋಶ್, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಹೆಚ್.ಎಸ್.ಮಂಜುಳಾ ಅಧಿಕಾರ ಸ್ವೀಕರಿಸಿದರು.
