ಕಳಸ:ಮಂಗಳೂರಿನ ಮಂಗಳಾ ಹೈಜೀನ್ ಪ್ರಾಡಕ್ಟ್ಸ್ ಸಂಸ್ಥೆಯ ಮಾಲೀಕರಾದ ಶೇಖರ್ ಶೆಟ್ಟಿ ಅವರಿಗೆ 2024ನೇ ಸಾಲಿನ ಇಂಡಿಯನ್ ಬಿಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರ ಸಂಸ್ಥೆಯು ಆರೋಗ್ಯ ರಕ್ಷಕ ಉತ್ಪನ್ನಗಳ ತಯಾರಿಕಾ ವಿಭಾಗದಲ್ಲಿ ಉತ್ಕ್ರಷ್ಟ ಸಂಸ್ಥೆ ಎಂಬ ಪ್ರಶಸ್ತಿ ಪಡೆದಿದೆ. ಕಳಸ ತಾಲ್ಲೂಕಿನ ಕೆಳಭಾಗದಲ್ಲಿ ಕಾಪಿ,ü ಅಡಿಕೆ ತೋಟ ಹೊಂದಿದ್ದು ಯಶಸ್ವಿ ಕೃಷಿಕರಾಗಿರುವ ಶೇಖರ್ ಶೆಟ್ಟಿ ಅವರಿಗೆ ಕಳಸದ ಜೊತೆಗೆ ಬಲವಾದ ನಂಟು ಇದೆ.ತಮ್ಮ ಬಾಲ್ಯದಿಂದ ಅವರು ಕಳಸದಲ್ಲಿ ಕಳೆದ ಅವಧಿಯು ದೀರ್ಘಕಾಲಿಕವಾದುದು.
1981ರಲ್ಲಿ ಫಿನಾಯಿಲ್ ಮೂಲಕ ಆರಂಭವಾದ ಅವರ ಮಂಗಳಾ ಸಂಸ್ಥೆಯು ಈಗ ಮಂಗಳೂರಿನಲ್ಲಿ 30 ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ.ದಕ್ಷಿಣ ಕರ್ನಾಟಕದ ಬಹುತೇಕ ಊರುಗಳಲ್ಲಿ ತನ್ನ ಮಾರುಕಟ್ಟೆ ಜಾಲ ಹೊಂದಿರುವ ಈ ಸಂಸ್ಥೆಯ ಸಾಧನೆ, ಗುಣಮಟ್ಟ, ಬೆಳವಣಿಗೆ ಕಂಡು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶೇಖರ್ ಶೆಟ್ಟಿ ಅವರಿಗೆ ಅವರ ಪುತ್ರ ಆದರ್ಶ ಶೆಟ್ಟಿ ಕೂಡ ವ್ಯವಹಾರದಲ್ಲಿ ಜೊತೆ ನೀಡುತ್ತಿದ್ದಾರೆ.ಎಲ್ಲ ಉತ್ಪನ್ನಗಳ ತಯಾರಿ ಜೊತೆಗೆ ಮಾರುಕಟ್ಟೆ ವಿಸ್ತರಣೆಯ ಬಗ್ಗೆಯೂ ಈ ತಂದೆ-ಮಗ ವಿಶೇಷ ಪ್ರಯತ್ನ ನಡೆಸುತ್ತಾರೆ.
ದಕ್ಷಿಣ ಕರ್ನಾಟಕದ ಹಲವಾರು ಪ್ರತಿಷ್ಟಿತ ಆಸ್ಪತ್ರೆ, ಶಾಲಾ ಕಾಲೇಜುಗಳು, ಹೊಟೆಲ್, ಕಚೇರಿಗಳಲ್ಲಿ ನಮ್ಮ ಮಂಗಳಾ ಸಂಸ್ಥೆ ಉತ್ಪನ್ನಗಳು ಬಳಕೆ ಆಗುತ್ತಿವೆ.ಕೇವಲ ಹಣ ಮಾಡಲು ಈ ವ್ಯವಹಾರ ನಡೆಸದೆ ಗ್ರಾಹರಿಕೆ ಸಮಾಧಾನ ಆಗುವಂತಹ ಉತ್ಪನ್ನ ನೀಡುವ ಗುರಿಯೊಂದಿಗೆ ಸಂಸ್ಥೆ ಬೆಳೆಸಿದ್ದೇವೆ ಎಂದು ಶೇಖರ್ ಶೆಟ್ಟಿ ಹೆಮ್ಮೆಯಿಂದ ಹೇಳುತ್ತಾರೆ.
ಫಿನಾಯಿಲ್ನಿಂದ ಆರಂಭಗೊಂಡ ಸಂಸ್ಥೆಯಲ್ಲಿ ಈಗ ಹ್ಯಾಂಡ್ ವಾಷ್, ಕಾರ್ ಶ್ಯಾಂಪೂ, ಹರ್ಬಲ್ ಕ್ಲೀನರ್, ಟಾಯ್ಲೆಟ್ ಮತ್ತು ಫ್ಲೋರ್ ಕ್ಲೀನರ್, ಪಾತ್ರೆ ತೊಳೆಯುವ ಲಿಕ್ವಿಡ್ ಕೂಡ ಉತ್ಪಾದನೆ ಆಗುತ್ತಿದೆ.
ತಮ್ಮ ಶಿಸ್ತಿನ ಜೀವನ ಶೈಲಿಯಿಂದ ಕೃಷಿ ಮತ್ತು ಉದ್ದಿಮೆಯ ಎರಡೂ ಕ್ಷೇತ್ರದಲ್ಲಿ ಯಶಸ್ಸು ಗಳಿಸಿರುವ ಶೇಖರ್ ಶೆಟ್ಟಿ ಅವರಿಗೆ ವಾಯ್ಸ್ ಆಫ್ ಕಳಸ ಪರವಾಗಿ ಅಭಿನಂದನೆಗಳು.
