ಕಳಸ:ಬೇಸಿಗೆ ಬಿಸಿ ಏರಿದಂತೆ ತಾಲ್ಲೂಕಿನಲ್ಲಿ ತಾಪಾಮಾನ 38 ಡಿಗ್ರಿ ತಲುಪಿದೆ.ಇದು ತೋಟಗಾರಿಕಾ ಬೆಳೆಗಳಾದ ಕಾಫಿ, ಅಡಿಕೆ, ಕಾಳುಮೆಣಸಿಗೆ ಪ್ರತಿಕೂಲ ವಾತಾವರಣ ಸೃಷ್ಟಿಸಿದೆ.
ತಾಲ್ಲೂಕಿನಲ್ಲಿ ತಾಪಮಾನ 33 ದಾಟಿದಾಗ ವಾಡಿಕೆಯಂತೆ ದಟ್ಟ ಮೋಡಗಳು ಕಂಡು ಬರುತ್ತಿದ್ದವು. ಮಾರ್ಚ್ 2 ಅಥವಾ 3ನೇ ವಾರದ ಒಳಗೆ ಬೇಸಿಗೆ ಮಳೆಯ ಮೊದಲ ಸಿಂಚನ ಕಂಡು ಬರುತ್ತಿತ್ತು.ಇಂದು ಕಂಡು ಬಂದ ದಟ್ಟ ಮೋಡ ಮಳೆಯ ಆಸೆ ಮೂಡಿಸಿದೆ.
ಬಿಸಿಲಿನ ಬೇಗೆಗೆ ಜನರ ಜೊತೆಗೆ ಜಾನುವಾರುಗಳು ಕೂಡ ಬಳಲಿವೆ.ಕಳೆದ ಮಳೆಗಾಲದಲ್ಲಿ ಕಡಿಮೆ ಆಗಿದ್ದ ಮಳೆಯ ಕಾರಣಕ್ಕೆ ಈ ಬಾರಿ ಸಣ್ಣ ಹಳ್ಳಗಳೆಲ್ಲ ಬತ್ತಿವೆ. ಜನರಿಗೆ ಕುಡಿಯಲು ನೀರಿನ ಕೊರತೆ ಉಂಟಾಗಿದೆ.ಜಾನುವಾರುಗಳು ಮತ್ತು ವನ್ಯ ಪ್ರಾಣಿಗಳು ಕುಡಿಯುವ ನೀರಿಗಾಗಿ ಅಲೆದಾಡುತ್ತಿವೆ.
ಇಂತಹ ಸನ್ನಿವೇಶದಲ್ಲಿ ತಾಲ್ಲೂಕಿನ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆಗೂ ನೀರಿನ ಕೊರತೆ ಅಗಿದೆ.ಮಲೆನಾಡಿನಲ್ಲಿ ಸಾಂಪ್ರದಾಯಿಕ ಕೆರೆಗಳು ಮತ್ತು ಸಣ್ಣ ಹಳ್ಳಗಳಲ್ಲಿ ಹರಿಯುತ್ತಿದ್ದ ನೀರಿನ ಆಸರೆಯಲ್ಲಿ ಕಾಫಿ, ಅಡಿಕೆ ತೋಟಗಳು ಜೀವ ಉಳಿಸಿಕೊಂಡಿದ್ದವು.
ಗಗನಕ್ಕೆ ಏರಿರುವ ಕಾಫಿ ಬೆಲೆ ತಂದ ಹುಮ್ಮಸ್ಸಿನಿಂದ ಈ ಬಾರಿ ತೋಟಕ್ಕೆ ನೀರಾವರಿ ಮಾಡುವ ಹುಮ್ಮಸ್ಸು ಅನೇಕ ಬೆಳೆಗಾರರಲ್ಲಿ ಇತ್ತು.ಆದರೆ ನೀರಿನ ಕೊರತೆಯಿಂದ ಆ ಕನಸು ಈಡೇರುತ್ತಿಲ್ಲ.
ಕಾಳುಮೆಣಸಿಗೆ ಕೂಡ ಬೇಸಿಗೆಯಲ್ಲಿ ನೀರು ಕೊಟ್ಟರೆ ಬಳ್ಳಿಗಳ ಆರೋಗ್ಯ ಮತ್ತು ಮುಂದಿನ ಫಸಲು ಉತ್ತಮ ಎಂದು ಸಾಬೀತಾಗಿದೆ.ಆದರೆ ಬಳ್ಳಿಗಳಿಗೆ ನೀರು ಪೂರೈಸಲು ಸಾಧ್ಯವಾಗದೆ ಬೆಳೆಗಾರರು ಕೈಚೆಲ್ಲಿದ್ದಾರೆ.
ತಮ್ಮ ತೋಟ, ಗದ್ದೆಯಲ್ಲಿ ನೀರಿನ ಒಸರು ಇರುವ ಎಲ್ಲ ಜಾಗದಲ್ಲೂ ಈ ಬಾರಿ ಕೃಷಿಕರು ಕೆರೆ ತೋಡಿಸುವ ಸಾಹಸ ಮಾಡುತ್ತಿದ್ದಾರೆ. ಬೋರ್ವೆಲ್ ಪ್ರಯತ್ನ ಹೆಚ್ಚಿನ ಕಡೆ ವಿಫಲ ಆಗಿದೆ. ಬೇಸಿಗೆ ಮಳೆ ಬಾರದ ಹೊರತು ಮಲೆನಾಡಿನಲ್ಲಿ ನೀರಿನ ಅಭಾವ ತೀರದು ಎಂಬುದು ನಿತ್ಯ ಸತ್ಯ ಆಗಿದೆ.
ಕೌಶಲ್ಯ ಇಲ್ಲದ ಕಾರ್ಮಿಕರು, ದುಬಾರಿ ಡೀಸೆಲ್ ಮತ್ತು ವಿದ್ಯುತ್ ಬಳಸಿ ಅತಿ ಪ್ರಯಾಸದಿಂದ ಸ್ಪ್ರಿಂಕ್ಲರ್ ನೀರಾವರಿ ಮಾಡುವುದು ಬೆಳೆಗಾರರಿಗೆ ಕೂಡ ಸಂಕಟದ ಸಂಗತಿ.ಆದ್ದರಿಂದ ಈಗಾಗಲೇ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ, ಹೋಮ ಕೂಡ ನಡೆದಿದೆ.
ಕೂಡಲೇ ಮಳೆ ಸುರಿದಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.ಆದ್ದರಿಂದಲೇ ಕೃಷಿಕರ ಕಣ್ಣು ಮೋಡಗಳ ಕಡೆಗೆ ನೆಟ್ಟಿದೆ.
