ಕಳಸ:ಕಳಸ ಪಟ್ಟಣದಲ್ಲಿ ಮಿನಿ ವಿಧಾನಸೌಧ ಮಾದರಿಯಲ್ಲಿ ‘ಪ್ರಜಾಸೌಧ’ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಮಂಜೂರಾಗಿದೆ. ಈಗಿನ ನಾಡ ಕಚೇರಿ ನಿವೇಶನದಲ್ಲೇ 2 ಮಹಡಿ ಕಟ್ಟಡ ಕಾಮಗಾರಿ ಆರಂಭ ಆಗಲಿದೆ. ಅಗತ್ಯವಿದ್ದರೆ 3 ಮತ್ತು 4ನೇ ಮಹಡಿ ನಿರ್ಮಾಣಕ್ಕೂ ಅವಕಾಶ ಇರುತ್ತದೆ.
ಪ್ರಜಾಸೌಧಕ್ಕೆ ಅನುದಾನ ತರುವಲ್ಲಿ ಯಶಸ್ವಿಯಾದ ಶಾಸಕಿ ನಯನಾ ಮೋಟಮ್ಮ , ಕಳಸ ತಾಲ್ಲೂಕಿನ ಜನರ ಮೂಡಿಗೆರೆ ಅಲೆದಾಟಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ ಎಂಬ ಸೂಚನೆ ನೀಡಿದ್ದಾರೆ.
ಕಳಸ ತಾಲ್ಲೂಕಿನ ನಾಗರೀಕರಿಗೆ ಅನುಕೂಲ ಆಗುವಂತೆ ಪ್ರಜಾಸೌಧದಲ್ಲಿ ತಹಶೀಲ್ದಾರ್ ಕಚೇರಿ ಜೊತೆಗೆ ಉಪನೊಂದಣಾಧಿಕಾರಿ, ಸರ್ವೆ, ಆಹಾರ ಇಲಾಖೆ ಮತ್ತಿತರ ವಿವಿಧ ಇಲಾಖೆಗಳ ಕಾರ್ಯಾರಂಭ ಆಗಲಿದೆ ಎಂದೂ ನಯನಾ ಮೋಟಮ್ಮ ಮಾಹಿತಿ ನೀಡಿದರು.

ಕಳಸ ತಾಲ್ಲೂಕು ಕೇಂದ್ರದ ಘೋಷಣೆ ಆಗಿ 3 ವರ್ಷದ ನಂತರ ಈ ಅನುದಾನ ಲಭ್ಯವಾಗಿರುವುದು ಸಕಾರಾತ್ಮಕ ಸೂಚನೆಯೇ ಆಗಿದೆ. ಆದರೆ ಈ ಕಾಮಗಾರಿ ಮುಗಿದು ವಿವಿಧ ಇಲಾಖೆಗಳು ಕಳಸಕ್ಕೆ ಬರಲು ಕನಿಷ್ಟ 2 ವರ್ಷಗಳು ಬೇಕಾಗಬಹುದು ಎಂಬುದು ಗ್ರಾಮಸ್ಥರ ಚಿಂತೆಗೆ ಕಾರಣವಾಗಿದೆ.
ಕಳಸ ಸಮೀಪದ ಹಿನಾರಿ ಬಳಿ ಸರ್ವೆ ನಂಬರ್ 90ರಲ್ಲಿ ಅಗ್ನಿಶಾಮಕ ದಳದ ಕಟ್ಟಡಕ್ಕೂ 3.5 ಕೋಟಿ ರೂಪಾಯಿ ಮಂಜೂರಾಗಿದೆ. ಕಳಸ ತಾಲ್ಲೂಕಿಗೆ ಬೇಕಾದ ಎಲ್ಲ ಮೂಲಸೌಕರ್ಯವನ್ನು ಒಂದೊಂದಾಗಿ ಕಲ್ಪಿಸಲಾಗುತ್ತಿದೆ ಎಂದು ನಯನಾ ಮೋಟಮ್ಮ ಭರವಸೆ ಮೂಡಿಸಿದ್ದಾರೆ.

ಮಂಗಳವಾರ ಕಳಸ ತಾಲ್ಲೂಕಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಅವರು ಗುದ್ದಲಿಪೂಜೆ ನೆರವೇರಿಸಿ ಕೆಲ ಕಾಮಗಾರಿಗಳನ್ನು ಉದ್ಘಾಟಿಸಿದರು. ನೆಲ್ಲಿಕೆರೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಅವರು ಉದ್ಘಾಟಿಸಿದರು. 55 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಅಬ್ಬುಗುಡಿಗೆ ಸೇತುವೆಯನ್ನೂ ಶಾಸಕಿ ಉದ್ಘಾಟಿಸಿದರು. ಅಲ್ಲಿನ ಗ್ರಾಮಸ್ಥರು ಶಾಸಕಿಯನ್ನು ಅತ್ಯಂತ ಸಂತೋಷದಿಂದ ಸನ್ಮಾನಿಸಿದರು.
ಪ್ರವಾಸಿಗರ ದಟ್ಟಣೆ ಕಾರಣಕ್ಕೆ ಸದಾ ವಿವಾದಕ್ಕೆ ಕಾರಣವಾಗುತ್ತಿದ್ದ ಸಂಸೆ-ಮುಳ್ಳೋಡಿ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮಂಜೂರಾಗಿದ್ದು ಈ ರಸ್ತೆ ಕಾಮಗಾರಿಗೆ ನಯನಾ ಮೋಟಮ್ಮ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು.

ತಾಲ್ಲೂಕಿನ ಮರಸಣಿಗೆ-ಗಾಳಿಗಂಡಿ-ತೊಡ್ಲು ಗ್ರಾಮದ ಮೂಲಕ ಕುದುರೆಮುಖ ರಸ್ತೆಗೆ ಸಂಪರ್ಕ ಕಲ್ಪಿಸುವ 2 ಕೋಟಿ ವೆಚ್ಚದ ಕಾಮಗಾರಿಗೂ ಶಾಸಕಿ ಗುದ್ದಲಿಪೂಜೆ ನೆರವೇರಿಸಿದರು.ಹಿರೇಬೈಲು-ಮಲ್ಲೇಶನಗುಡ್ಡ- ಬಾಳೆಹೊಳೆ ರಸ್ತೆಯಿಂದ ನಾಗನಮಕ್ಕಿ ಮೂಲಕ ಮರಸಣಿಗೆ ರಸ್ತೆ ಸಂಪರ್ಕಕೆ 2 ಕೋಟಿ ವೆಚ್ಚದ ಕಾಮಗಾರಿಗೆ ನಯನಾ ಮೋಟಮ್ಮ ಚಾಲನೆ ನೀಡಿದರು.
ಹೊಸ ಬಡಾವಣೆಯಾದ ಅಣ್ಣಪ್ಪನಗರ ರಸ್ತೆ ಅಭಿವೃದ್ಧಿಗೂ ಗುದ್ದಲಿಪೂಜೆ ನೆರವೇರಿಸಿದರು.ಕಳಸ ತಾಲ್ಲೂಕು ಗ್ಯಾರಂಟಿ ಕಚೇರಿಯನ್ನೂ ಅವರು ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಿದರು. ಮುಂದಿನ 4 ವರ್ಷದಲ್ಲಿ ಕ್ಷೇತ್ರದ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ ಎಂದರು.
ಕಾಂಗ್ರೆಸ್ ಮುಖಂಡರಾದ ಶ್ರೇಣಿಕ, ಪ್ರಭಾಕರ್, ರಾಜೇಂದ್ರ, ವೀರೇಂದ್ರ, ವಿಶ್ವನಾಥ್, ಗಣೇಶ್ ಭಟ್, ರಫೀಕ್, ಮಹೇಶ್ ಇದ್ದರು.
