ಕಳಸ:ಕಳಸ ತಾಲ್ಲೂಕು ಘೋಷಣೆ ಆಗಿ 3 ವರ್ಷ ಕಳೆದರೂ ಕಳಸದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.ತಾಲ್ಲೂಕಿನ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕಳಸ ತಾಲ್ಲೂಕು ಸಮಗ್ರ ಅಭಿವೃದ್ಧಿ ಸಮಿತಿಯನ್ನು ಭಾನುವಾರ ರಚಿಸಲಾಗಿದೆ.
ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಜಿ.ಕೆ.ಮಂಜಪ್ಪಯ್ಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು ಶೇಷಗಿರಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಗೊಪಾಲ ಶೆಟ್ಟಿ, ಕಳಸ ತಾಲ್ಲೂಕು ಕೇಂದ್ರವಾಗಲು ಎಲ್ಲ ರಾಜಕೀಯ ಪಕ್ಷಗಳು ಕೆಲಸ ಮಾಡಿವೆ.ಆದರೆ ತಾಲ್ಲೂಕು ಘೋಷಣೆಯಾದ ಕಳೆದ 3 ವರ್ಷದಲ್ಲಿ ಸಂಬಂಧಪಟ್ಟವರು ಕೆಲಸ ಮಾಡದೇ ಇರುವುದರಿಂದ ತಾಲ್ಲೂಕು ಕೇಂದ್ರ ನೆನೆಗುದಿಗೆ ಬಿದ್ದಿದೆ.ಈಗಿನ ಶಾಸಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಅಗತ್ಯ ಇದೆ ಎಂದರು.

ಮಂಜಪ್ಪಯ್ಯ ಮಾತನಾಡಿ, 2021ರಲ್ಲಿ ಕಳಸ ತಾಲ್ಲೂಕು ಅಂತಿಮ ಅಧಿಸೂಚನೆ ಆದ ನಂತರವೂ ಕಳಸದಲ್ಲಿ ತಾಲ್ಲೂಕು ಕೇಂದ್ರಕ್ಕೆ ಸಂಬಂಧಿಸಿದ ಕೆಲಸಗಳು ಆಗಿಲ್ಲ.3 ವರ್ಷ ಕಾಲಹರಣ ಮಾಡಲಾಗಿದೆ.2 ವರ್ಷದಲ್ಲಿ 7 ತಹಶೀಲ್ದಾರ್ ಬಂದು ಹೋಗಿದ್ದಾರೆ.ವಿವಿಧ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಿಸಬಹುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕಳಸ ಬಂದ್ ಮಾಡಿ ಪ್ರತಿಭಟನಾ ಮೆರವಣಿಗ ನಡೆಸಲು ಯೋಚಿಸಲಾಗುತ್ತಿದೆ ಎಂದರು.
ಎಂ.ಎ.ಶೇಷಗಿರಿ ಮಾತನಾಡಿ, ಕಳಸ ತಾಲ್ಲೂಕು ಕೇಂದ್ರವಾದಾಗ ನಾವೆಲ್ಲ ತುಂಬಾ ಸಂತಸಪಟ್ಟಿದ್ದೆವು.ಆದರೆ ಇದೀಗ ಒದಗಿರುವ ತ್ರಿಶಂಕು ಸ್ಥಿತಿ ಬಗ್ಗೆ ಎಲ್ಲರಿಗೂ ಬೇಸರ ಆಗಿದೆ ಎಂದರು.ಸಂತೋಷ್ ಹಿನಾರಿ ಮಾತನಾಡಿ, ಶಾಸಕರು ಕಳಸದಲ್ಲಿ ಈವರೆಗೂ ಜನಸಂಪರ್ಕ ಸಭೆ ನಡೆಸಿಲ್ಲ, ಜನರ ಅಹವಾಲು ಆರಿಸಿಲ್ಲ.ಕಂದಾಯ ಇಲಾಖೆಯು ಕೂಡ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದರು.
ಜ್ವಾಲನಯ್ಯ ಮಾತನಾಡಿ, ಕಳಸ ತಾಲ್ಲೂಕು ಆದ ನಂತರ ಜನರಿಗೆ ತೊಂದರೆಯೇ ಹೆಚ್ಚಾಗಿದೆ.ಈಗಲೂ ಮೂಡಿಗೆರೆಯಲ್ಲೇ ನಮ್ಮ ಕೆಲಸ ಆಗಬೇಕಿದೆ ಎಂದು ಅಸಮಾಧಾನ ಹೊರಹಾಕಿದರು.
ಕಳಸ ತಾಲ್ಲೂಕು ಅಭಿವೃದ್ಧಿ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಚಗಾನೆ ರಂಗನಾಥ್, ಸಂಚಾಲಕರಾಗಿ ಸಂತೋಷ್ ಹಿನಾರಿ, ಜ್ವಾಲನಯ್ಯ, ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ಆಶಾಲತಾ, ಸುಜಯಾ, ನಾಗೇಶ್ ಮತ್ತಿತರರನ್ನು ಆರಿಸಲಾಯಿತು.
