ಕಳಸ:ಇಲ್ಲಿನ ಕಳಸ ಯುವಕ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಫ್ರೆಂಡ್ಸ್ ಕಳಸ ತಂಡ ಗೆದ್ದುಕೊಂಡಿದೆ.
ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಕಳಸದ ಮಹೇಶ್, ಮಾರುತೇಶ್ ಮಾಲೀಕತ್ವದ ಫ್ರೆಂಡ್ಸ್ ತಂಡ ಆದರ್ಶ ಮತ್ತು ರಾಜೇಶ್ ಮಾಲೀಕತ್ವದ ಎ.ಆರ್.ಫ್ರೆಂಡ್ಸ್ ತಂಡವನ್ನು ಸುಲಭವಾಗಿ ಸೋಲಿಸಿತು.ವಿಜೇತ ತಂಡ ಒಂದು ಲಕ್ಷ ರೂಪಾಯಿ ನಗದು ಜೊತೆಗೆ ಆಕರ್ಷಕ ಟ್ರೋಫಿ ಪಡೆಯಿತು.

ರನ್ನರ್ಸ್ ಪ್ರಶಸ್ತಿ ಗಳಿಸಿದ ಎ.ಆರ್.ಫ್ರೆಂಡ್ಸ್ ತಂಡ 50 ಸಾವಿರ ನಗದು ಮತ್ತು ಟ್ರೋಫಿಗೆ ತೃಪ್ತಿಪಟ್ಟಿತು.ಫ್ರೆಂಡ್ಸ್ ಕಳಸ ತಂಡದ ಮುನೀಂದ್ರ ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು. ಮುನೀಂದ್ರ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಕೂಡ ಪಡೆದುಕೊಂಡರು. ಟೀಮ್ ಫ್ರೆಂಡ್ಸ್ ತಂಡದ ಬೌಲರ್ ಹೇಮಂತ್ ಶ್ರೇಷ್ಟ ಬೌಲರ್ ಪ್ರಶಸ್ತಿ ಪಡೆದರು. ಅದೇ ತಂಡದ ಪವನ್ ರೆಡ್ಡಿ ಶ್ರೇಷ್ಟ ಕ್ಷೇತ್ರರಕ್ಷಕ ಪ್ರಶಸ್ತಿ ಪಡೆದರು.
ಆನಂತರ ನಡೆದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹೊರನಾಡಿನ ಜಿ.ಭೀಮೇಶ್ವರ ಜೋಷಿ, ಕಳಸ ಯುವಕ ಸಂಘವು ಕಳಸದಲ್ಲಿ ಸಾಮಾಜಿಕ ಮತ್ತು ಕ್ರೀಡಾ ಚಟುವಟಿಕೆ ಮೂಲಕ ತನ್ನ ಛಾಪು ಒತ್ತುತಿದೆ. ದಿವಂಗತ ಎನ್.ಎಂ. ಹರ್ಷ ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುತ್ತಾ ಇದೆ ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಕಳಸದ ಅಭಿವೃದ್ಧಿ ಬಗ್ಗೆ ಸದಾ ಕನಸು ಕಾಣುತ್ತಿದ್ದ ಎನ್.ಎಂ.ಹರ್ಷ ಅಕಾಲಿಕ ಸಾವು ಇಡೀ ಊರಿಗೇ ನಷ್ಟ. ಅವರ ಆಶಯದಂತೆ ಯುವಜನರು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಬೇಕು ಎಂದರು.
ದಾನಿಗಳಾದ ಕೆ.ಸಿ.ಧರಣೇಂದ್ರ, ಕೆ.ಆರ್.ಪ್ರಭಾಕರ್, ಕೆ.ಕೆ.ಬಾಲಕೃಷ್ಣ ಭಟ್, ಪ್ರಸನ್ನ ಗಿರಿಸಿರಿ, ಅನಿಲ್ ಡಿಸೋಜ, ಸಂತೋಷ್ ಹಿನಾರಿ, ಕೆ.ಎ.ಶ್ರೇಣಿಕ, ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್, ಸಿಪಿಐ ಮುಖಂಡ ಗೋಪಾಲ್ ಶೆಟ್ಟಿ, ಅಜಿತ್, ವೀರೇಂದ್ರ, ವಾಸುದೇವ ಭಾಗವಹಿಸಿದ್ದರು. ಯುವಕ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
