ಕಳಸ:ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ತಜ್ಞರ ಹುದ್ದೆ ಖಾಲಿ ಇರುವುದರಿಂದ ಕಾರ್ಮಿಕರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೂರದ ರಾಜ್ಯಗಳಿಂದ ಬಹಳಷ್ಟು ಕಾರ್ಮಿಕರು ಕಾಫಿ ನಾಡಿಗೆ ಕೆಲಸಕ್ಕೆ ಬರುತ್ತಾರೆ.ಆ ಪೈಕಿ ಅನೇಕ ಗರ್ಭಿಣಿಯರೂ ಇರುತ್ತಾರೆ.ಅಂತಹ ಕಾರ್ಮಿಕ ಮಹಿಳೆಯೊಬ್ಬರು ಶುಕ್ರವಾರ ಆಂಬುಲೆನ್ಸ್ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದರು.
ಮರಸಣಿಗೆ ಗ್ರಾಮದ ಕಾಫಿ ಎಸ್ಟೇಟಿನಲ್ಲಿ ಕೆಲಸಕ್ಕೆ ಬಂದಿರುವ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮಮ್ತಾಜ್ ಬೇಗಂ ಅವರಿಗೆ ಶುಕ್ರವಾರ ಹೆರಿಗೆ ನೋವು ಬಂದಿದೆ. ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ಮೂಲಕ ಬಂದಿದ್ದಾರೆ.ಆದರೆ ಅಲ್ಲಿ ಹೆರಿಗೆ ಮಾಡಿಸಲು ವೈದ್ಯರೇ ಇಲ್ಲದೆ ಕಂಗಾಲಾಗಿದ್ದಾರೆ. ಖಾಸಗಿ ಆಸ್ಪತ್ರೆ ಸೇರಲು ಹಣ ಇಲ್ಲದೆ 70 ಕಿ.ಮೀ ದೂರದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಅನಿವಾರ್ಯವಾಗಿ ಹೊರಟಿದ್ದಾರೆ..

ದಾರಿಮಧ್ಯೆಯಲ್ಲಿ ಹೆರಿಗೆ ನೋವು ಹೆಚ್ಚಾದಾಗ ಆಂಬುಲೆನ್ಸ್ ಸಿಬ್ಬಂದಿ ಷಣ್ಮುಖ ಹೆರಿಗೆ ಮಾಡಿಸಿದ್ದಾರೆ. ಈಗ ಗಂಡು ಮಗು ಮತ್ತು ತಾಯಿ ಮುಮ್ತಾಜ್ ಬೇಗಂ ಆರೋಗ್ಯವಾಗಿದ್ದಾರೆ. ಹೆರಿಗೆ ಮಾಡಿಸಲು ಷಣ್ಮುಖ ಅವರಿಗೆ ಆಂಬುಲೆನ್ಸ್ ಚಾಲಕ ಶಿವಕುಮಾರ್ ಕೂಡ ನೆರವಾಗಿದ್ದಾರೆ.
ತಾಲ್ಲೂಕು ಕೇಂದ್ರವಾದ ಕಳಸಕ್ಕೆ ಯಾವಾಗ ತಾಲ್ಲೂಕು ಆಸ್ಪತ್ರೆ ಸ್ಥಾನಮಾನ ಸಿಗುವುದೋ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಅಲ್ಲಿವರೆಗೂ ಅಗತ್ಯ ವೈದ್ಯರ ನೇಮಕ ಆಗದೆ ಬಡ ರೋಗಿಗಳ ಸಂಕಷ್ಟ ಹೆಚ್ಚುತ್ತಲೇ ಇರುತ್ತದೆ.
