ಕಳಸ:2019ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಭೂ ಕುಸಿತದಿಂದ ಮನೆ ಕಳೆದುಕೊಂಡು ಪುನರ್ವಸತಿಗೆ ಕಾಯುತ್ತಿದ್ದ ಚನ್ನಡಲಿನ ಸಂತ್ರಸ್ತರಿಗೆ ಸಿಹಿ ಸುದ್ದಿ ಬಂದಿದೆ. ಕಳೆದ 5 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಚನ್ನಡಲಿನ ಅತಿವೃಷ್ಟಿ ಸಂತ್ರಸ್ತರಿಗೆ ತಿಂಗಳೊಳಗೆ ಹಕ್ಕು ಪತ್ರ ಸಿಗಲಿದೆ.
ಇಡಕಿಣಿ ಗ್ರಾಮದ ಸರ್ವೆ ನಂಬರ್ 129ರಲ್ಲಿ ಈಗಾಗಲೇ 2.20 ಎಕರೆ ಭೂಮಿ ಸಂತ್ರಸ್ತರ ಪುನರ್ವಸತಿಗಾಗಿ ಮಂಜೂರು ಆಗಿತ್ತು. ಆದರೆ ಮರಸಣಿಗೆ ಗ್ರಾಮದ ಸಂತ್ರಸ್ತರಿಗೆ ಇಡಕಿಣಿ ಗ್ರಾಮದಲ್ಲಿ ನಿವೇಶನ ನೀಡಲು ರಾಜೀವ ಗಾಂಧಿ ವಸತಿ ನಿಗಮದಲ್ಲಿ ತಾಂತ್ರಿಕ ತೊಂದರೆ ಎದುರಾಗಿತ್ತು.

5 ವರ್ಷಗಳಿಂದ ನಿವೇಶನದ ಹಕ್ಕುಪತ್ರಕ್ಕೆ ಕಾದು ಹೈರಾಣಾಗಿದ್ದ ಸಂತ್ರಸ್ತರು ಸರ್ಕಾರದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದರು. ಶಾಸಕಿ ನಯನಾ ಮೋಟಮ್ಮ ಚನ್ನಡಲಿನ 14 ಕುಟುಂಬಗಳ ಸಂಕಷ್ಟ ಅರಿತು ಕಳೆದ 1 ವರ್ಷದಿಂದ ಇವರ ಹಕ್ಕುಪತ್ರಕ್ಕಾಗಿ ಸತತ ಪ್ರಯತ್ನ ನಡೆಸಿದ್ದರು. ರಾಜೀವ ಗಾಂಧಿ ವಸತಿ ನಿಗಮದಲ್ಲಿ ಈ ಸಂತ್ರಸ್ತರ ಹಕ್ಕುಪತ್ರ ಬಿಡುಗಡೆ ಆಗಲು ಇದ್ದ ತೊಡಕು ನಿವಾರಿಸುವಲ್ಲಿ ಶಾಸಕಿ ಕೊನೆಗೂ ಸಫಲರಾದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಶನಿವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಳಸ ತಹಶೀಲ್ದಾರ್ ಅವರಿಗೆ ಅಧಿಕೃತ ಜ್ಞಾಪನ ಹೊರಡಿಸಿದ್ದು ನಿವೇಶನದ ಹಕ್ಕುಪತ್ರಕ್ಕೆ ಸಹಿ ಮಾಡಲು ಕಳಸ ತಹಶೀಲ್ದಾರ್ ಅವರನ್ನು ಸಕ್ಷಮ ಅಧಿಕಾರಿಯಾಗಿ ನೇಮಿಸಿದ್ದಾರೆ. ರಾಜೀವ ಗಾಂಧಿ ವಸತಿ ನಿಗಮದಿಂದ ಬಂದಿರುವ ಹಕ್ಕುಪತ್ರಗಳಿಗೆ ಸಕ್ಷಮ ಅಧಿಕಾರಿ ಸಹಿ ಮಾಡಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿ ಒಂದು ತಿಂಗಳ ಒಳಗೆ ವಿತರಣೆ ಮಾಡಬೇಕು ಎಂದೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
