ಕಳಸ:ಪೆಹಲ್ಗಾಮ್ನಲ್ಲಿ ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಕಳೆದ ತಿಂಗಳು ಕಾಶ್ಮೀರದಲ್ಲಿ ನಡೆದ ಆಪರೇಶನ್ ಸಿಂಧೂರದಲ್ಲಿ ಭಾಗವಹಿಸಿದ್ದ ಕಳಸ ಮೂಲದ ಯೋಧ ಬಿ.ಡಿ.ರಾಜಪ್ಪ ಅವರನ್ನು ಪಟ್ಟಣದಲ್ಲಿ ಬುಧವಾರ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ಕಳಸ ಸಮೀಪದ ಹಳುವಳ್ಳಿಯ ದಂದಾಡಿ ನಿವಾಸಿಯಾದ ರಾಜಪ್ಪ ಆಪರೇಶನ್ ಸಿಂಧೂರದಲ್ಲಿ ಕಾಲಿಗೆ ಗಾಯಗೊಂಡು ರಜೆಯ ಮೇಲೆ ಕಳಸಕ್ಕೆ ಮಂಗಳವಾರವಷ್ಟೇ ಹಿಂದಿರುಗಿದ್ದರು. ಗಡಿಭದ್ರತಾ ಪಡೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಸೇವಿ ಸಲ್ಲಿಸುತ್ತಿರುವ ಅವರು ಉಗ್ರರೊಂದಿನ ಮುಖಾಮುಖಿ ವೇಳೆಗೆ ತಮ್ಮ ಸೈನಿಕರನ್ನು ಕಾಪಾಡುವ ಯತ್ನದಲ್ಲಿ ಕಾಲಿಗೆ ಗಾಯವಾಗಿತ್ತು.
ಬುಧವಾರ ಬೆಳಿಗ್ಗೆ ಕೆಪಿಎಸ್ ಶಾಲಾ ಆವರಣದಲ್ಲಿ ಕಳಸ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ನೆರೆದು ಯೋಧನಿಗೆ ಗೌರವ ಸಲ್ಲಿಸಿದರು. ಆನಂತರ ಕಳಸ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ಕಾವ್ಯ ಮತ್ತು ಸಿಬ್ಬಂದಿ ರಾಜಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಕಳಸದ 30ಕ್ಕೂ ಹೆಚ್ಚು ಸಂಘಟನೆಗಳು, ಗ್ರಾಮ ಪಂಚಾಯಿತಿಗಳು, ವಿವಿಧ ಇಲಾಖೆಗಳು, ರಾಜಕೀಯ ಪಕ್ಷಗಳು ಕೂಡ ಯೋಧ ರಾಜಪ್ಪ ಅವರನ್ನು ಗೌರವಿಸಿದವು. ಅನ್ನಪೂರ್ಣೇಶ್ವರಿ ಮೋಟಾರ್ಸ್ ಸಂಸ್ಥೆಯ ಮಾಲೀಕ ಕೆ.ಕೆ.ಬಾಲಕೃಷ್ಣ ಭಟ್, ರಾಜಪ್ಪ ಮತ್ತು ಅವರ ಪತ್ನಿಗೆ ಜೀವಿತಾವಧಿಗೆ ಉಚಿತ ಬಸ್ ಪಾಸ್ ವಿತರಿಸಿದರು.

ಪಟ್ಟಣದ ಪ್ರಬೋಧಿನಿ ವಿದ್ಯಾಕೇಂದ್ರದ ವಿದ್ಯಾರ್ಥಿ ಅಭಿನವ ತನ್ನ ಒಂದು ವರ್ಷದ ಉಳಿತಾಯದ ಮೊತ್ತವನ್ನು ಯೋಧನಿಗೆ ಕೊಡುಗೆ ಕೊಟ್ಟು ಗಮನ ಸೆಳೆದನು. ಆನಂತರ ಕಳಸದ ಮುಖ್ಯ ರಸ್ತೆ ಮತ್ತು ರಥ ಬೀದಿಯಲ್ಲಿ ಅಲಂಕೃತ ವಾಹನದಲ್ಲಿ ಯೋಧನ ಮೆರವಣಿಗೆ ಮಾಡಲಾಯಿತು.
ದಾರಿಯುದ್ದಕ್ಕೂ ಜನರು ರಾಜಪ್ಪ ಅವರಿಗೆ ಹೂಗಳನ್ನು ಎರಚಿ, ಹೂಮಾಲೆ ಹಾಕಿ ಸಡಗರಪಟ್ಟರು. ಕಳಸೇಶ್ವರ ದೇವಸ್ಥಾನದ ಬಳಿ ಜನರನ್ನು ಉದ್ದೇಶಿಸಿ ಮಾತನಾಡಿದ ಯೋಧ ರಾಜಪ್ಪ, ದೇಶಸೇವೆಯಂತಹ ಪುಣ್ಯದ ಕೆಲಸ ಇಲ್ಲ. ತವರಿನ ಜನರ ಈ ಪ್ರೀತಿ ಕಂಡು ನನಗೆ ಇನ್ನಷ್ಟು ಹುಮ್ಮಸ್ಸು ಬಂದಿದೆ. ತಾಯ್ನಾಡಿನ ಸೇವೆ ಮಾಡಲು ಇನ್ನಷ್ಟು ಪ್ರೇರಣೆ ಬಂದಿದೆ ಎಂದರು.
ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಧುರೀಣರು, ಅಧಿಕಾರಿಗಳು, ಸಾರ್ವಜನಿಕರು ಇದ್ದರು
