ಕಳಸ:ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಕಾಫಿ ತೋಟಗಳಲ್ಲಿ ಗಿಡ ಕಡಿದು ಒತ್ತುವರಿ ಖುಲ್ಲಾ ಮಾಡುತ್ತಿರುವ ಬಗ್ಗೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ಟ್ರಸ್ಟಿ ಜಿ.ರಾಮನಾರಾಯಣ ಜೋಷಿ ಮುಖ್ಯಮಂತ್ರಿ ಗಮನ ಸೆಳೆದರು.
ಅರಣ್ಯ ಇಲಾಖೆಯು ಕಾಫಿ ತೋಟಗಳ ಒತ್ತುವರಿ ಖುಲ್ಲಾ ಮಾಡುವ ಕಾರ್ಯಾಚರಣೆಯಿಂದ ಮೂರೂ ಜಿಲ್ಲೆಗಳ ಕೃಷಿಕರಲ್ಲಿ ಆತಂಕ, ಅನಿಶ್ಚಿತತೆ ಮೂಡಿದೆ. ಸರ್ಕಾರ ಈ ಕಾರ್ಯಾಚರಣೆ ಕೈಬಿಡಬೇಕು ಎಂದು ಸೋಮವಾರ ಸಿದ್ಧರಾಮಯ್ಯ ಅವರನ್ನು ಬೆಂಗಳೂರಿನ ನಿವಾಸದಲ್ಲಿ ರಾಮನಾರಾಯಣ ಜೋಷಿ ಭೇಟಿ ಮಾಡಿ ಒತ್ತಾಯಿಸಿದರು.
ಅನೇಕ ವರ್ಷಗಳಿಂದ ರೈತರು ಶ್ರಮವಹಿಸಿ, ಬಂಡವಾಳ ಹೂಡಿ ಬೆಳೆಸಿದ ಗಿಡಗಳನ್ನು ಅರಣ್ಯ ಇಲಾಖೆ ಒಂದೇ ದಿನದಲ್ಲಿ ಕಡಿದು ಹಾಕುವ ಕ್ರಮ ಸರಿಯಲ್ಲ. ದೇಶಕ್ಕೆ ವಿದೇಶಿ ವಿನಿಮಯ ನೀಡುತ್ತಿರುವ ಕಾಫಿ ಉದ್ಯಮದ ಬಗ್ಗೆ ಎಚ್ಚರಿಕೆ ಕ್ರಮ ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಕಾಫಿ ತೋಟ ನಂಬಿಕೊಂಡು ಮೂರು ಜಿಲ್ಲೆಗಳ ಲಕ್ಷಾಂತರ ಬೆಳೆಗಾರರು ಮತ್ತು ಕಾರ್ಮಿಕರು ತಮ್ಮ ಜೀವನ ನಡೆಸುತ್ತಿದ್ದಾರೆ. ಒತ್ತುವರಿ ಖುಲ್ಲಾ ವಿಚಾರವು ಎಲ್ಲರಲ್ಲೂ ಚಿಂತೆ ಮೂಡಿಸಿದೆ.ಈ ಬಗ್ಗೆ ಸಕಾರಾತ್ಮಕ ನಿರ್ಣಯ ತೆಗೆದುಕೊಳ್ಳಬೇಕು ಎಂದೂ ರಾಮನಾರಾಯಣ ಜೋಷಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದರು.
ಈ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.
