ಕಳಸ:ಇಲ್ಲಿನ ಕೆಪಿಎಸ್ ಶಾಲಾ ಮೈದಾನದಲ್ಲೇ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಮಾಡುವ ಪ್ರಸ್ತಾಪಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡ ಕೆಳಗೂರು ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಕ್ರೀಡಾಂಗಣಕ್ಕೆ 2 ಕೋಟಿ ರೂಪಾಯಿ ಮಂಜೂರಾಗಿದೆ. ಹೊಸದಾಗಿ 5 ಎಕರೆ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಬದಲು ಶಾಲೆಯ ಸಣ್ಣ ಮೈದಾನವನ್ನೇ ತಾಲ್ಲೂಕು ಕ್ರೀಡಾಂಗಣ ಮಾಡುವ ಹಿಂದೆ ಹುನ್ನಾರ ಇದೆ ಎಂದು ಅವರು ಆರೋಪಿಸಿದ್ದಾರೆ.
ಕಳಸದ ಸರ್ವೆ ನಂಬರ್ 641ರಲ್ಲಿ ನೆಲ್ಲಿಕೆರೆ ಬಳಿ 30 ಎಕರೆ ಕಂದಾಯ ಭೂಮಿ ಲಭ್ಯವಿದೆ.ಇದರಲ್ಲಿ 5 ಎಕರೆ ಕ್ರೀಡಾಂಗಣಕ್ಕೆ ಮತ್ತು 2 ಎಕರೆ ತಾಲ್ಲೂಕು ಆಸ್ಪತ್ರೆಗೆ ಕೂಡಲೇ ಕಂದಾಯ ಇಲಾಖೆ ಮಂಜೂರು ಮಾಡಬೇಕು. ಭೂಮಿ ಒತ್ತುವರಿ ಆಗಿದ್ದರೂ ತೆರವು ಮಾಡಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಆದೇಶಿಸಿದ್ದಾರೆ ಎಂದೂ ರಮೇಶ್ ತಿಳಿಸಿದ್ದಾರೆ.
ಈಗಿನ ಕೆಪಿಎಸ್ ಮೈದಾನದಲ್ಲಿ ತಾಲ್ಲೂಕು ಕ್ರೀಡಾಂಗಣ ಮಾಡಿದರೆ ಒಂದು ಸುತ್ತಿನಲ್ಲಿ 400 ಮೀಟರ್ ಟ್ಯ್ರಾಕ್ ಸಿಗದೆ 200 ಮೀಠರ್ ಮಾತ್ರ ಸಿಗುತ್ತದೆ. ಇದರಿಂದ ಕಳಸದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಅನ್ಯಾಯ ಆಗುತ್ತದೆ. ಭವಿಷ್ಯದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲೂ ಅಸಾಧ್ಯ. ಜೊತೆಗೆ ಶಾಲೆಯ ಪಕ್ಕದಲ್ಲೇ ತಾಲ್ಲೂಕು ಕ್ರೀಡಾಂಗಣ ಮಾಡುವುದರಿಂದ ಭವಿಷ್ಯದಲ್ಲಿ ಪಾಠ ಪ್ರವಚನಕ್ಕೆ ಅಡ್ಡಿ ಆಗುತ್ತದೆ ಎಂದೂ ಅವರು ಗಮನ ಸೆಳೆದಿದ್ದಾರೆ.
