ಮೂಡಿಗೆರೆ ಸಮೀಪದ ಹಂತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಪಾಶ್ರ್ವನಾಥ ಸ್ವಾಮಿ ತೀರ್ಥಂಕರರ ಬಸದಿಯ ಸಂಪ್ರೋಕ್ಷಣಾಪೂರ್ವಕ ಪಂಚಕಲ್ಯಾಣ ಇದೇ 22ರಿಂದ 24ರವರೆಗೆ ನಡೆಯಲಿದೆ.
ಹೊಯ್ಸಳ ಸಾಮ್ರಾಜ್ಯದ ರಾಜವಂಶಸ್ಥರಿಂದ 900 ವರ್ಷಗಳ ಹಿಂದೆ ಹಂತೂರು ಬಸದಿ ಪ್ರತಿಷ್ಟಾಪನೆ ಆಗತ್ತು. ಶಿಥಿಲಾವಸ್ಥೆಗೆ ತಲುಪಿದ್ದ ಈ ಬಸದಿಯನ್ನು ಸ್ಥಳೀಯರ ಸಹಕಾರದೊಂದಿಗೆ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ಶೀತಲ್ ಎಂಜಿನಿಯರ್ಸ್ ಸಂಸ್ಥೆಯ ಕೀರ್ತಿ ಜೈನ್ ಕೂಡ ದೇಗುಲದ ಪುನರ್ ನಿರ್ಮಾಣಕ್ಕೆ ನೆರವು ನೀಡಿದ್ದು ಬಸದಿಯ ಕಾಮಗಾರಿ ಅಲ್ಪ ಅವಧಿಯಲ್ಲೇ ಸುಂದರವಾಗಿ ಸಾಕಾರಗೊಂಡಿದೆ.
ಕಳೆದ 2 ವಾರದಿಂದ ಬಸದಿಯ ಸುತ್ತಮುತ್ತಲಿನ ಪರಿಸರವನ್ನು ರಮ್ಯಗೊಳಿಸುವ ಕಾರ್ಯವು ಕಳಸ ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಬ್ರಹ್ಮದೇವ ನೇತೃತ್ವದಲ್ಲಿ ಬಿರುಸಾಗಿ ನಡೆದಿದೆ. ಕಳಸ ಸೀಮೆಯ ನೂರಾರು ಜೈನ ಬಾಂಧವರು ಪ್ರತಿ ದಿನ ಶ್ರಮದಾನ ಮಾಡುತ್ತಾ ಬಸದಿಯ ನಿರ್ಮಾಣದಲ್ಲಿ ತಮ್ಮ ಪಾತ್ರ ವಹಿಸುತ್ತಿದ್ದಾರೆ.
ನಿವೃತ್ತ ಉಪ ತಹಶೀಲ್ದಾರ್ ಸಂಸೆಯ ಕೀರ್ತಿ ಜೈನ್ ತಂಡವು ತಾಲ್ಲೂಕಿನ ಮೂಲೆ ಮೂಲೆಗೂ ತೆರಳಿ ಆಹ್ವಾನ ಪತ್ರಿಕೆ ತಲುಪಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ.
ಹಂತೂರು ಆಸುಪಾಸಿನ ಕೃಷಿಕರ ಒತ್ತಾಸೆ ಮೇರೆಗೆ ಆರಂಭಗೊಂಡಿದ್ದ ಬಸದಿಯ ಪುನರ್ ನಿರ್ಮಾಣ ಕಳಸ ಸೀಮೆಯ ಜೈನ ಸಮುದಾಯ ಮಧ್ಯಪ್ರವೇಶ ಮಾಡಿದ ಮೇಲೆ ಇನ್ನಷ್ಟು ಹುರುಪಿನಿಂದ ನಡೆದಿದೆ.
ಮಾರ್ಚ್ 22ರ ಶುಕ್ರವಾರ ಬೆಳಿಗ್ಗೆ ಇಂದ್ರ ಪ್ರತಿಷ್ಟೆ ತೋರಣ ಮುಹೂರ್ತ, ಧ್ವಜಾರೋಹಣ, ವಿಮಾನಶುದ್ಧಿ ರೂಪದಲ್ಲಿ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳಲಿವೆ.ಮಧ್ಯಾಹ್ನದ ನಂತರ ಕ್ಷೇತ್ರಪಾಲ ಪ್ರತಿಷ್ಟೆ, ನಾಗಾರಾಧನೆ ಪ್ರತಿಷ್ಟೆ ಮತ್ತು ರಾತ್ರಿ ದೈವ ಪ್ರತಿಷ್ಟೆ ನಡೆಯಲಿದೆ.
23ರ ಶನಿವಾರ ವಾಸ್ತುಪೂಜೆ, ನವಗ್ರಹ ಮಹಾಶಾಂತಿ, ಬ್ರಹ್ಮಯಕ್ಷ ಪ್ರತಿಷ್ಟೆ, ಧರಣೇಂದ್ರ ಯಕ್ಷ, ಪದ್ಮಾವತಿ ಯಕ್ಷಿ ಪ್ರತಿಷ್ಟೆ ನೆರವೇರಲಿದೆ.ಯಜ್ಞಶಾಲೆಯಲ್ಲಿ ಜನ್ಮ ಕಲ್ಯಾಣ, ಜನ್ಮಾಭಿಷೇಕ, ದೀಕ್ಷಾ ಕಲ್ಯಾಣ, ರಾತ್ರಿ ಸರ್ವಣ ಯಕ್ಷ ಉತ್ಸವ ನಡೆಯಲಿದೆ.
24ರಂದು ಚತುರ್ದಿಕ್ಷು ಹೋಮ, ಆಹಾರದಾನ ವಿಧಿ, ಕೇವಲಜ್ಞಾನ ಕಲ್ಯಾಣ, ನಯನೋನ್ಮಿಲನ, ಸ್ವಾಮಿ ಪ್ರತಿಷ್ಟೆ, ಶಿಖರಾರೋಹಣ, ಕಲಿಕುಂಡ ಯಂತ್ರಾರಾಧನೆ, ಸಿದ್ಧಚಕ್ರ ಆರಾಧನೆ, 504 ಕಲಶಾಭಿಷೇಕ, ಧ್ವಜಾವರೋಹಣ, ಕುಂಕುಮೋತ್ಸವದೊಂದಿಗೆ ಪ್ರತಿಷ್ಟಾ ವಿಧಿಗಳು ಪೂರ್ಣಗೊಳ್ಳಲಿವೆ.
ಮೂರೂ ದಿನಗಳಂದು ಸಂಜೆ 6.30ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದು 22ರಂದು ಸುಕುಮಾರ್ ಬಲ್ಲಾಳ್ ಮತ್ತು ಹೊರನಾಡು ಜಯಶ್ರೀ ಡಿ.ಜೈನ್ ಪಂಚಕಲ್ಯಾಣ ದೃಶ್ಯಾವಳಿಗಳನ್ನು ಕಟ್ಟಿಕೊಡಲಿದ್ದಾರೆ.
23ರಂದು ಕಾರ್ಕಳದ ಲಲಿತಕಲಾ ಯಕ್ಷ ಮಂಡಳಿಯು ಶ್ರೀ ಪದ್ಮಾವತಿ ಮಹಾತ್ಮೆ ಮತ್ತು ಜಿನ ಯಕ್ಷಗಾನ ನೃತ್ಯ ವೈಭವ ಪ್ರದರ್ಶಿಸಲಿದ್ದಾರೆ.24ರಂದು ಮಕ್ಕಿಮನೆ ಕಲಾವೃಂದ ವೈವಿಧ್ಯಮಯ ಪ್ರದರ್ಶನ ನೀಡಲಿದೆ.
22ರಿಂದ 24ರವರೆಗೆ ಪ್ರತಿದಿನ ಮಧ್ಯಾಹ್ನ 2.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ವಿವಿಧ ಮಠಾಧೀಶರು, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಕಳಸ ಸೀಮೆಯ ಎಲ್ಲ ಜೈನ ಬಸದಿಗಳ ಅಧ್ಯಕ್ಷರು, ಹಂತೂರು ಬಸದಿ ಜೀರ್ಣೋದ್ಧಾರ ಸಮಿತಿ ಮತ್ತು ಪಂಚಕಲ್ಯಾಣದ ಸಮಿತಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
