ಕಳಸ:ತಾಲ್ಲೂಕಿನಲ್ಲಿ ಕಳೆದ 2 ದಿನಗಳಿಂದ ಕವಿದಿದ್ದ ಮೋಡ ಶನಿವಾರ ಮಧ್ಯಾಹ್ನ ಕರಗಿ ಭರ್ಜರಿ ಮಳೆ ಸುರಿದಿದೆ.
ಮಧ್ಯಾಹ್ನ 3.30 ರಿಂದ 5 ಗಂಟೆ ಒಳಗೆ ಕಳಸ, ಸಂಸೆ, ಹಿರೇಬೈಲು, ಮರಸಣಿಗೆ, ಹಿನಾರಿ, ಮುನ್ನೂರುಪಾಲು, ಹಳುವಳ್ಳಿ ಪ್ರದೇಶದಲ್ಲಿ ಮಳೆ ಸುರಿದಿದೆ. ವೇಗವಾದ ಗಾಳಿ, ಗುಡುಗು, ಸಿಡಿಲಿನ ಆರ್ಭಟ ಬೇಸಿಗೆ ಮಳೆಗೆ ರಂಗು ಏರಿಸಿತ್ತು.
ವಿಶೇಷವಾಗಿ ಮರಸಣಿಗೆ, ಹಿರೇಬೈಲ್ ಸುತ್ತಮುತ್ತ 1.5 ಇಂಚು ಹಾಗೂ 2 ಇಂಚು ಮಳೆ ಸುರಿದು ಕೃಷಿಕರಲ್ಲಿ ಆಶಾಕಿರಣ ಮೂಡಿಸಿದೆ.ಸಾಮಾನ್ಯವಾಗಿ ಬೇಸಿಗೆ ಮಳೆ ಸರಿಯಾಗಿ ಬೀಳದ ಈ ಪ್ರದೇಶದಲ್ಲಿ ಇಂದಿನ ಮಳೆ ಬೆಳೆಗಾರರಲ್ಲಿ ಹುಮ್ಮಸ್ಸು ತಂದಿದೆ.

ನನ್ನ ಜೀವನದಲ್ಲಿ ಮಾರ್ಚ್ ತಿಂಗಳಲ್ಲಿ ಇಷ್ಟು ಮಳೆ ನೋಡಿರಲಿಲ್ಲ ಎಂದು ಮರಸಣಿಗೆ ವಿಶ್ವನಾಥ್ ಉದ್ಘರಿಸಿದರು.ಸುರಿಮಳೆಯಿಂದ ರಸ್ತೆಗೆ ಬಿದ್ದದ್ದ ಮರಗಳನ್ನು ವಿಶ್ವನಾಥ್ ಮತ್ತು ಅವರ ತಂಡ ತೆರವು ಮಾಡಿ ಜನಪರ ಕಾಳಜಿ ತೋರಿದರು.
ಬಿರುಬೇಸಿಗೆಯ ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಸುರಿದ ಈ ಮಳೆ ಕಾಫಿ, ಅಡಿಕೆ ತೋಟಗಳಿಗೆ ಆಧಾರವಾಗಿದೆ.ಕುಡಿಯುವ ನೀರಿಗೆ ಕೂಡ ಬಹಳಷ್ಟು ಸಮಸ್ಯೆ ಆಗಿದ್ದ ತಾಲ್ಲೂಕಿನ ವಿವಿಧೆಡೆ ಈ ಮಳೆ ನೀರಿನ ಸಮಸ್ಯೆ ನೀಗುವ ಸಾಧ್ಯತೆ ಇದೆ.
ವಾತಾವರಣದ ತಾಪಮಾನ ಕೂಡ ಈ ಮಳೆಯಿಂದ ಕುಸಿದಿದ್ದು ಜನರಿಗೆ ಆಹ್ಲಾದ ತಂದಿದೆ.ಇಂದಿನ ಮಳೆಯಿಂದ ಮುಂದಿನ ಭಾನುವಾರ ಕಾಫಿ ಹೂ ಸಮೃದ್ಧವಾಗಿ ಅರಳುವ ನಿರೀಕ್ಷೆ ಇದೆ.
ಶನಿವಾರ ಮಳೆಯ ಭಾಗ್ಯ ಪಡೆಯದ ತಾಲ್ಲೂಕಿನ ಬೇರೆ ಪ್ರದೇಶದಲ್ಲಿ ಕೂಡ ಜನರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾದಿದ್ದಾರೆ. ಭಾನುವಾರ ಕೂಡ ಮಳೆ ಸುರಿಯುವ ಸಾಧ್ಯತೆ ಇದ್ದು ಎಲ್ಲೆಡೆ ಮಳೆ ಆಗಲಿ ಎಂಬುದು ವಾಯ್ಸ್ ಆಫ್ ಕಳಸ ಹಾರೈಕೆ.
