ರವಿ ಕೆಳಂಗಡಿ
ಕಳಸ:ರೊಬಸ್ಟಾ ಕಾಫಿ ಬೆಳೆಗಾರರಿಗೆ ಬೇಸಿಗೆಯ ಬಿಸಿ ನಡುವೆಯೂ ಆಹ್ಲಾದ ತರುವ ಸುದ್ದಿ ಬಂದಿದೆ. ಪ್ರತಿ ಕೆಜಿ ಕಾಫಿ ಬೇಳೆಯ ಬೆಲೆ 334 ರೂಪಾಯಿಗೆ ಏರಿದ್ದು ಸಾರ್ವಕಾಲಿಕ ಗರಿಷ್ಟ ಬೆಲೆ ಎಂಬ ದಾಖಲೆಗೆ ಪಾತ್ರವಾಗಿದೆ.
ಕಳೆದ ಜನವರಿಯಿಂದ ರೊಬಸ್ಟಾ ಕಾಫಿ ಬೆಲೆಯು ದಿನೇ ದಿನೇ ಏರುತ್ತಿದೆ.ಇಂದು ಲಂಡನ್ ಮಾರುಕಟ್ಟೆಯಲ್ಲಿ ಪ್ರತಿ ಟನ್ ರೊಬಸ್ಟಾ ಬೇಳೆಯ ಧಾರಣೆ 3550 ಡಾಲರ್ ಆಗಿದೆ.ಇದರಿಂದ 50 ಕೆಜಿ ರೊಬಸ್ಟಾ ಚೆರಿ ಕಾಫಿ ಮೂಟೆಯ ಬೆಲೆ 8500-9000 ರೂಪಾಯಿಯ ಗೌರವ ಪಡೆದಿದೆ.
‘ಪ್ರತಿ 50 ಕೆಜಿ ಮೂಟೆಗೆ 28 ಕೆಜಿ ಓಟ್ ಟರ್ನ್ ಬರುವ ನಮ್ಮ ಕಾಫಿಗೆ ಈಗಾಗಲೇ ಚೀಲಕ್ಕೆ 10 ಸಾವಿರ ರೂಪಾಯಿಗೆ ಬೇಡಿಕೆ ಬಂದಿದೆ.ಆದರೆ ಮೇ ತಿಂಗಳವರೆಗೂ ಇನ್ನಷ್ಟು ಬೆಲೆ ಏರುವ ನಿರೀಕ್ಷೆಯಿಂದ ಕಾಯುತ್ತೇನೆ’ ಎಂದು ಎಡೂರಿನ ಬೆಳೆಗಾರ ಓಸ್ವಾಲ್ಡ್ ಪಿರೇರಾ ವಿಶ್ವಾಸದಿಂದ ಹೇಳುತ್ತಾರೆ.
ಜಾಗತಿಕವಾಗಿ ಗರಿಷ್ಟ ಪ್ರಮಾಣದ ರೊಬಸ್ಟಾ ಕಾಫಿ ವಿಯೆಟ್ನಾಂ ದೇಶದಲ್ಲಿ ಬೆಳೆಯುತ್ತದೆ. 2023-24ರ ಸಾಲಿನಲ್ಲಿ ವಿಯೆಟ್ನಾಂ ದೇಶದಲ್ಲಿ ಎಲ್ ನಿನೋ ಪರಿಣಾಮದಿಂದ ಶೇ.10ರಿಂದ 20ರಷ್ಟು ಬೆಳೆ ಹಾನಿ ಆಗಿದೆ. ಇದರಿಂದಲೇ ರೊಬಸ್ಟಾ ಬೆಲೆ ನಾಗಾಲೋಟದಲ್ಲಿ ಏರಿಕೆ ಕಾಣುತ್ತಿದೆ.

ಕಳೆದ 4 ವರ್ಷದಲ್ಲೇ ವಿಯೆಟ್ನಾಂ ದೇಶದಲ್ಲಿ ಅತಿ ಕಡಿಮೆ ಫಸಲು ಕಂಡು ಬಂದಿದೆ.ಜೊತೆಗೆ 2023-24ರ ಸಾಲಿನ ಜಾಗತಿಕ ರೊಬಸ್ಟಾ ಉತ್ಪಾದನೆ ಕಡಿಮೆ ಆಗಿರುವುದರಿಂದ ಬೇಡಿಕೆ ಏರುತ್ತಲೇ ಇದೆ.ಪರಿಣಾಮವಾಗಿ ಬೆಲೆ ಏರಿಕೆಯ ಗ್ರಾಫ್ ಕೂಡ ಮೇಲ್ಮಟ್ಟದಲ್ಲೇ ಸಾಗುತ್ತಿದೆ.ಇದು ಎಲ್ಲಿಯವರೆಗೆ ಏರಬಹುದು ಎಂಬುದು ಯಾವ ಊಹೆಗೂ ಸಿಗುತ್ತಿಲ್ಲ.
ಹಿಂದೊಮ್ಮೆ ಅರೇಬಿಕಾ ಕಾಫಿಯ ಅರ್ಧ ಬೆಲೆಗೆ ರೊಬಸ್ಟಾ ಮಾರಾಟ ಆಗುತ್ತಿತ್ತು.ಆದರೆ ಕಳೆದ 10 ವರ್ಷದಲ್ಲಿ ರೊಬಸ್ಟಾ ಕಾಫಿಗೆ ಯೂರೋಪ್ ದೇಶದಲ್ಲಿ ವಿಶೇಷ ಮಾರುಕಟ್ಟೆ ಸೃಷ್ಟಿ ಆಗಿದೆ.ಇದೀಗ ಅಚ್ಚರಿ ಎಂದರೆ ಹೆಚ್ಚಿನ ಗುಣಮಟ್ಟದ ಅರೇಬಿಕಾ ಬೆಲೆಯನ್ನು ಮೀರಿ ರೊಬಸ್ಟಾ ಬೆಲೆ ಏರುತ್ತಲೇ ಇದೆ.
ಕಳೆದ ಜನವರಿಯಲ್ಲಿ ರೊಬಸ್ಟಾ ಚೆರ್ರಿ ಚೀಲಕ್ಕೆ 7 ಸಾವಿರ ರೂಪಾಯಿ ಬೆಲೆ ಇತ್ತು.ಫೆಬ್ರವರಿಯಲ್ಲಿ 7200ರಿಂದ 7500 ಧಾರಣೆ ಸಿಕ್ಕಿತ್ತು.ಆನಂತರ ಈ ತಿಂಗಳ 15ರ ವೇಳೆಗೆ 8000 ರೂಪಾಯಿ ಬೆಲೆ ಬಂದಾಗ ಬಹುತೇಕ ಬೆಳೆಗಾರರು ಕಾಫಿ ಮಾರಾಟ ಮಾಡಿದ್ದಾರೆ.

ಹೆಚ್ಚಿನ ಬೆಳೆಗಾರರು ಶೇ.10ರಿಂದ 25 ಕಾಫಿ ಉಳಿಸಿಕೊಂಡಿದ್ದಾರೆ. ಅವರಿಗೆ ಗರಿಷ್ಟ ಮೊತ್ತದಲ್ಲಿ ಕಾಫಿ ಮಾರಾಟ ಮಾಡಿದ ಸಮಾಧಾನ ಸಿಗಲಿದೆ.ಕಡಿಮೆ ಬೆಲೆಗೆ ಮರಾಟ ಮಾಡಿದವರಲ್ಲಿ ನಿರಾಸೆ ಕಂಡು ಬರುತ್ತಿದೆ.
ತೋಟದ ನಿರ್ವಹಣೆ ವೆಚ್ಚ, ಕಾರ್ಮಿಕರ ಸಮಸ್ಯೆ ಬಗೆಹರಿಸಲಾರದಷ್ಟು ಜಟಿಲ ಆಗಿರುವ ಈ ಹಂತದಲ್ಲಿ ಈ ಬೆಲೆ ಏರಿಕೆ ಬೆಳೆಗಾರರ ಪಾಲಿನ ಆಮ್ಲಜನಕ ಆಗಲಿದೆ.ಪಾಳು ಬಿದ್ದಿದ್ದ ಅನೇಕ ತೋಟಗಳಲ್ಲಿ ಮತ್ತೆ ಕೃಷಿ ಕಾರ್ಯ ಚುರುಕಾಗಿ ನಡೆಯಲು ಬಂಪರ್ ಬೆಲೆ ಪೂರಕವಾಗಲಿದೆ.
