ಕಳಸ:ಚುನಾವಣೆಯಲ್ಲಿ ಗೆದ್ದು ದೆಹಲಿಯಲ್ಲಿ ಕೂರುವವರರಿಂದ ಮತದಾರರಿಗೆ ಯಾವ ಉಪಯೋಗವೂ ಇಲ್ಲ.ಜನರ ಮಧ್ಯೆ ಇದ್ದು ಅವರ ಕಷ್ಟ, ಸಮಸ್ಯೆ ನೀಗಿಸುವವರೇ ನಿಜವಾದ ಜನಪ್ರತಿನಿಧಿ ಎಂದು ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವ್ಯಾಖ್ಯಾನಿಸಿದರು.
ಕಳಸ ಮಹಾವೀರ ಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಮೋದಿ ಹೆಸರಿನಲ್ಲಿ ಮತ ಕೇಳುವ ಅಭ್ಯರ್ಥಿಗಳಿಗೆ ತನ್ನ ಬಗ್ಗೆ ನಂಬಿಕೆ, ವಿಶ್ವಾಸ ಇಲ್ಲ ಎಂದೇ ಹೇಳಬೇಕು.ನಾನು ನಿಮ್ಮ ಕ್ಷೇತ್ರದ ಯಾವುದೇ ಸಮಸ್ಯೆ, ಕೆಲಸ ಇದ್ದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ವಿಶ್ವಾಸದಿಂದ ನಿಮ್ಮ ಮತ ಕೇಳುತ್ತೇನೆ.ನಿಮ್ಮ ಮಧ್ಯೆಯೇ ಇದ್ದು ಜನಪರ ಕೆಲಸ ಮಾಡುತ್ತೇನೆ ಎಂದು ಹೆಗ್ಡೆ ಭರವಸೆ ನೀಡಿದರು.
ರಾಜ್ಯ ಸರ್ಕಾರ 50 ಸಾವಿರ ಕೋಟಿ ವೆಚ್ಚದಲ್ಲಿ ಜನರ ಕಲ್ಯಾಣಕ್ಕಾಗಿ ಕೊಟ್ಟ 5 ಗ್ಯಾರಂಟಿಗಳ ಬಗ್ಗೆ ಕೆಲವರು ಟೀಕೆ ಮಾಡುತ್ತಾರೆ.ರಾಜ್ಯ ದಿವಾಳಿ ಆಗುತ್ತದೆ ಎಂದು ಹಂಗಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಕಾರ್ಪೋರೆಟ್ ಸಂಸ್ಥೆಗಳ 11 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದನ್ನು ಮರೆಯುತ್ತಾರೆ.ರೈತರ ಸಾಲ ಮನ್ನಾ ಮಾಡಲಾರದ ಕೇಂದ್ರ ಸರ್ಕಾರ ಉದ್ಯಮಿಗಳ ಕೋಟಿಗಟ್ಟಲೆ ಸಾಲ ಮನ್ನಾ ಮಾಡಿದೆ ಎಂದರು.

ಡೀಸೆಲ್, ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ತೆಗೆದಿದ್ದರಿಂದ ರಿಲಯನ್ಸ್ ಮತ್ತಿತರ ಖಾಸಗಿ ಅನಿಲ ಸಂಸ್ಥೆಗಳಿಗೆ ಭಾರಿ ಲಾಭ ಆಗಿದೆ.ಸರ್ಕಾರಿ ಅನಿಲ ಸಂಸ್ಥೆಗಳು ದಿವಾಳಿ ಆಗಲಿವೆ ಎಂದೂ ಅವರು ಹೇಳಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬ್ರಾಹ್ಮಣರ ಮನೆಯಲ್ಲಿ ಇದ್ದ ಬಿಜೆಪಿ ಪಕ್ಷವನ್ನು ದಲಿತರ, ಗಿರಿಜನರ ಮನೆಗೆ ನಾನು ಕೊಂಡೊಯ್ದೆ.ಈಗ ಆ ಎಲ್ಲರ ಮನೆಗೆ ಕಾಂಗ್ರೆಸ್ ಪಕ್ಷವನ್ನು ಕೊಂಡೊಯ್ಯಲು ಸತತ ಕೆಲಸ ಮಾಡುತ್ತೇನೆ ಎಂದರು.
ಮೋದಿ, ಅಮಿತ್ ಶಾ ಜೋಷಿ ದೇಶದಲ್ಲಿ ಸರ್ವಾಧಿಕಾರ ಸ್ಥಾಪಿಸುತ್ತಿದೆ.ಕರ್ನಾಟಕ ಭೀಕರ ಬರ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ ಎಂದೂ ಕುಮಾರಸ್ವಾಮಿ ಟೀಕಿಸಿದರು.
ಕಳಸದಲ್ಲಿ ಬಿಜೆಪಿ ಹರಿದ ಮನೆ ಆಗಿದೆ.ಅದನ್ನು ಇನ್ನಷ್ಟು ಬಲಹೀನ ಮಾಡಲು ನಾನು ಮನೆ ಮನೆಗೆ ಹೋಗಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ ಎಂದೂ ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಂಶುಮಂತ್ ಮಾತನಾಡಿ, ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಇದು ಸಂವಿಧಾನ ಉಳಿಸುವ ಚುನಾವಣೆ ಆಗಿದೆ.ಕಾಂಗ್ರೆಸ್ ತಾನು ಕೊಟ್ಟ ಎಲ್ಲ ಭರವಸೆ ಈಡೇರಿಸುವ ಪಕ್ಷವಾಗಿದೆ.ರಾಜ್ಯದಲ್ಲಿ ಸಿದ್ಧರಾಮಯ್ಯ ಅವರಂತೆ ಮಲ್ಲಿಕಾರ್ಜುನ ಖರ್ಗೆ ಕೂಡ ಕೇಂದ್ರದಲ್ಲಿ ಎಲ್ಲ ಭರವಸೆ ಈಡೇರಿಸುತ್ತಾರೆ ಎಂದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಕ್ಷೇತ್ರದ ಕಾರ್ಯಕರ್ತರ ಪರಿಶ್ರಮದಿಂದ ಮೂಡಿಗೆರೆ ಕ್ಷೇತ್ರದಲ್ಲಿ 20 ವರ್ಷದಿಂದ ಇಲ್ಲವಾಗಿದ್ದ ಶಾಸಕ ಸ್ಥಾನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ.ಅದರಂತೆ 10 ವರ್ಷದಿಂದ ಕೈ ತಪ್ಪಿರುವ ಸಂಸದ ಸ್ಥಾನವನ್ನೂ ಕಾರ್ಯಕರ್ತರೇ ಶ್ರಮವಹಿಸಿ ಕಾಂಗ್ರೆಸ್ಗೆ ಕೊಡಬೇಕು ಎಂದರು.
ಕಳಸ, ಮೂಡಿಗೆರೆ ತಾಲ್ಲೂಕಿಗೆ ಹಿಂದಿನ ಸಂಸದೆ ಕೊಟ್ಟ ಅನುದಾನ ಶೂನ್ಯ.ಅವರಿಗೆ ಅವರ ಪಕ್ಷದಲ್ಲೇ ಕಂಡು ಬಂದ ವಿರೋಧದಿಂದ ಬೇರೆ ಅಭ್ಯರ್ಥಿ ತರಲಾಗಿದೆ.ಜಯಪ್ರಕಾಶ್ ಹೆಗ್ಡೆಯವರು ತಮ್ಮ 20 ತಿಂಗಳ ಅವಧಿಯಲ್ಲಿ ಮಾಡಿದ ಕೆಲಸ ಕಳೆದ 10 ವರ್ಷದಲ್ಲಿ ಆಗಿಲ್ಲ. ಇದೇ ಕಾರಣಕ್ಕೆ ಹೆಗ್ಡೆ ಅವರನ್ನು ನಾವು ಮತ್ತೆ ಆರಿಸಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ, ಇನಾಂ ಭೂಮಿ ಹೋರಾಟದಲ್ಲಿ ಹೆಗ್ಡೆ ಮಾಡಿದ ಪ್ರಯತ್ನ ವಿವರಿಸಿದರು. ಅಡಿಕೆ ಬೆಲೆ ಸ್ಥಿರತೆ ಬರಲು ಜಯಪ್ರಕಾಶ್ ಹೆಗ್ಡೆ ತಮ್ಮ ಅಲ್ಪ ಅವಧಿಯಲ್ಲೇ ಮಾಡಿದ್ದ ಹೋರಾಟ ಮತ್ತು ಗಳಿಸಿದ ಯಶಸ್ಸು ನೆನಪಿಸಿದರು.ಕ್ವಿಂಟಾಲಿಗೆ 20 ಸಾವಿರ ಇದ್ದ ಅಡಿಕೆ ಬೆಲೆ 50 ಸಾವಿರ ರೂಪಾಯಿಗೆ ತಲುಪಲು ಹೆಗ್ಡೆ ಅವರೇ ಕಾರಣ ಎಂದು ಕೊಂಡಾಡಿದರು.
ಮಾಜಿ ಸಚಿವ ನಿಂಗಯ್ಯ ಮಾತನಾಡಿ, ಹೆಗ್ಡೆಯಂತಹ ಸರಳ, ಸಜ್ಜನಿಕೆಯ ಅರ್ಹ ವ್ಯಕ್ತಿ ನಮ್ಮ ಸಂಸದರಾಗಿ ಆಯ್ಕೆಯಾದಲ್ಲಿ ಕ್ಷೇತ್ರದ ಎಲ್ಲ ಸಮಸ್ಯೆಗೂ ದನಿಯಾಗುತ್ತಾರೆ.ಅವರು ಪ್ರಾಮಾಣಿಕ ಕೆಲಸಗಾರ ಎಂದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಅಧ್ಯಕ್ಷತೆ ವಹಿಸಿದ್ದರು.ಮುಖಂಡರಾದ ರಾಜೇಂದ್ರ, ಕೆ.ಸಿ.ಧರಣೇಂದ್ರ, ಬಾಳೂರು ಘಟಕದ ಶ್ರೀನಾಥ್, ವಿಶ್ವನಾಥ್ ಇದ್ದರು.
