ಕಳಸ:ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಕಳಸದಲ್ಲಿ ಸೋಮವಾರ ರಾತ್ರಿ ರೋಡ್ ಶೋ ನಡೆಸಿದರು. ಆನಂತರ ನಡೆದ ಬಹಿರಂಗ ಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷ ಮತ್ತು ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮೂರು ಬಾರಿ ನಮ್ಮ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಎಂ.ಪಿ.ಕುಮಾರಸ್ವಾಮಿ ಈಗ ಪಕ್ಷ ಬಿಟ್ಟ ನಂತರ ಪಕ್ಷದ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ.ಈ ಚುನಾವಣೆಯಲ್ಲಿ ಪಕ್ಷವು ಕಳಸ ತಾಲ್ಲೂಕಿನಲ್ಲಿ ದೊಡ್ಡ ಲೀಡ್ ಗಳಿಸಿ ಅವರ ಬಾಯಿ ಮುಚ್ಚಿಸುತ್ತೇವೆ.ಈ ಚುನಾವಣೆ ನಂತರ ಅವರು ಎಲ್ಲಿ ಇರುತ್ತಾರೆ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜಿಲ್ಲಾ ಕಾರ್ಯದರ್ಶಿ ಎಂ.ಎ.ಶೇಷಗಿರಿ ಹೇಳಿದರು.
ಜೆಡಿಎಸ್ ಮುಖಂಡ ಮಂಜಪ್ಪಯ್ಯ ಮಾತನಾಡಿ, ಕಳಸ ತಾಲ್ಲೂಕಿನಲ್ಲಿ ಯಾವುದೇ ಶಾಶ್ವತ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ.ಇಲ್ಲಿ ಎಲ್ಲ ಸೇತುವೆ, ರಸ್ತೆ, ಕಾಲೇಜು, ಆಸ್ಪತ್ರೆಯಂತಹ ಯಾವುದೇ ಶಾಶ್ವತ ಅಭಿವೃದ್ಧಿ ಕೆಲಸ ಬಿಜೆಪಿ ಮತ್ತು ಜೆಡಿಎಸ್ ಅವಧಿಯಲ್ಲೇ ಆಗಿದೆ. ತಾವು ಶಾಸಕರಾಗಿದ್ದಾಗ ಕೈಲಾಗದಂತೆ ಇದ್ದ ಮಾಜಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಂಡು ಈ ಚುನಾವಣೆಯಲ್ಲಿ ಮತ ಪಡೆಯುವ ಹಗಲುಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.
ಪ್ರಕಾಶ್ ಸಮಿತಿ ಬಂದಿದ್ದಾಗ ಮಾಜಿ ಶಾಸಕ ಕುಮಾರಸ್ವಾಮಿ ಕಳಸ ತಾಲ್ಲೂಕು ರಚನೆಗೆ ಅಡ್ಡಗಾಲು ಹಾಕಿದ್ದವರು. ನಮ್ಮ ಪಕ್ಷದ ಧುರೀಣ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕಳಸ ತಾಲ್ಲೂಕು ಮಾಡಿದರು. ಈಗಿನ ಶಾಸಕಿ ಗೆದ್ದು 11 ತಿಂಗಳು ಆಗಿದ್ದರೂ ತಾಲ್ಲೂಕು ಕೇಂದ್ರಕ್ಕೆ ಯಾವ ಕೊಡುಗೆ ಕೊಟ್ಟಿದ್ದಾರೆ. ತಾಲ್ಲೂಕಿಗೆ ಬೇಕಾದ ಯಾವುದೇ ವ್ಯವಸ್ಥೆ ಮಾಡಲು ಅವರು ವಿಫಲರಾಗಿದ್ದಾರೆ.ತಾಲ್ಲೂಕು ಕಚೇರಿ ಔಪಚಾರಿಕವಾಗಿ ಮಾತ್ರ ಇದೆ.ಒಳ್ಳೇ ತಹಶೀಲ್ದಾರ್ ಅವರನ್ನು ಕೊಡಲು ಕೂಡ ಇವರಿಗೆ ಆಗಿಲ್ಲ ಎಂದು ಮಂಜಪ್ಪಯ್ಯ ಟೀಕಿಸಿದರು.
ಒಂದು ಕಾಲದಲ್ಲಿ ನಮ್ಮ ಸೈನಿಕರಿಗೆ ಯುದ್ಧಕ್ಕೆ ಬೇಕಾದ ಮದ್ದು ಗುಂಡು ಪೂರೈಸಲಾರದ ಸರ್ಕಾರ ಇತ್ತು. ದುಂಡಾವರ್ತನೆ ಮಾಡುವ ಚೀನಾ ದೇಶವನ್ನು ಹೆದರಿಸಬಲ್ಲ ಮೋದಿ ನಮ್ಮ ಪ್ರಧಾನಿ ಆಗಿದ್ದಾರೆ. ಇದು ನಮಗೆ ಹೆಮ್ಮೆ ಎಂದು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಬಣ್ಣಿಸಿದರು.

ಇಡೀ ದೇಶದ ಜನರಿಗೆ ಕೋವಿಡ್ ಲಸಿಕೆ ಉಚಿತವಾಗಿ ಕೊಟ್ಟು ಪ್ರಾಣ ಕಾಪಾಡಿದ್ದ ಪ್ರಧಾನಿ ಈಗ ದೇಶದ 80 ಕೋಟಿ ಬಡವರಿಗೆ ಉಚಿತ ಧಾನ್ಯ ಪೂರೈಸುತ್ತಿದ್ದಾರೆ.ನಮ್ಮ ದೇಶವನ್ನು ಮುನ್ನಡೆಸಿ, ದೇಶದ ಸಮಗ್ರತೆ ಉಳಿಸುವ ಅರ್ಹತೆ ಇರುವ ಏಕೈಕ ವ್ಯಕ್ತಿ ಮೋದಿ ಎಂದೂ ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪದೆ ವಿಫಲವಾಗಿದೆ ಎಂದೂ ಪೂಜಾರಿ ಟೀಕಿಸಿದರು.
ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿ ಸರಳವಾಗಿ ಕಂಡರೂ ಅಪ್ರತಿಮ ಜ್ಞಾನ ಉಳ್ಳವರು, ಪ್ರಾಮಾಣಿಕ ಕೆಲಸಗಾರರು.ಪಂಚಾಯಿತಿ ಸದಸ್ಯತ್ವದಿಂದ ಹಿಡಿದು ವಿರೋಧ ಪಕ್ಷದ ನಾಯಕನವರೆಗೆ ಎಲ್ಲ ಹುದ್ದೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.ದೇಶಕ್ಕೆ ಬಿಜೆಪಿ ಕೊಟ್ಟ ಕೊಡುಗೆಗಳನ್ನು ವಾಜಪೇಯಿ ಕಾಲದಿಂದ ಮೋದಿ ಆಡಳಿತದ 10 ವರ್ಷಗಳವರೆಗೆ ಅವರು ಬಣ್ಣಿಸಿದರು.
ಪಕ್ಷದ ಮುಖಂಡರಾದ ದೀಪಕ್ ದೊಡ್ಡಯ್ಯ ಮಾತನಾಡಿ, ಶಾಸಕಿ ನಯನಾ ಮೋಟಮ್ಮ ಕಳಸಕ್ಕೆ ಎಷ್ಟು ಬಾರಿ ಬಂದಿದ್ದಾರೆ.ಇಲ್ಲಿಗೆ ಯಾವ ಕೆಲಸ ಮಾಡಿದ್ದಾರೆ ಎಂಬುದು ಜನರಿಗೇ ಗೊತ್ತಿದೆ ಎಂದು ಅಣಕಿಸಿದರು. ಜ್ವಾಲನಯ್ಯ, ರಂಜನ್ ಅಜಿತ್, ರತನ್ ಮಾತನಾಡಿದರು.ನಾಗೇಶ್,ನಾಗಭೂಷಣ್, ವೆಂಕಟಸುಬ್ಬಯ್ಯ, ಸುಜಯಾ,ಸಂತೋಷ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕಲ್ಲುಗೋಡು ಬಾಲಕೃಷ್ಣ, ನೆಲ್ಲಿಕೋಟ ರಮೇಶ್, ಗೊಡ್ಲುಮನೆ ರಮೇಶ್ಗೌಡ ಬಿಜೆಪಿ ಸೇರಿದರು.
