ಕಳಸ:ಪಟ್ಟಣದ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯು ಕಳಸ ಕೆಪಿಎಸ್ ಶಾಲೆಗೆ ಇಂದು 30 ಡೆಸ್ಕ್ ಹಾಗೂ ಬೆಂಚ್ ಕೊಡುಗೆ ನೀಡಿದೆ.
ಕೆಪಿಎಸ್ ಶಾಲೆಯಲ್ಲಿ ಪೀಠೋಪಕರಣದ ಕೊರತೆ ಕಾರಣಕ್ಕೆ ಮಕ್ಕಳು ನೆಲದ ಮೇಲೆ ಕುಳಿತು ವ್ಯಾಸಂಗ ಮಾಡುತ್ತಿದ್ದರು. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯು ಗ್ರಾಮ ಅರಣ್ಯ ಸಮಿತಿಯ ಗಮನ ಸೆಳೆದಿತ್ತು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ ಮಾರ್ಗದರ್ಶನದಲ್ಲಿ ಕೆಪಿಎಸ್ ಶಾಲೆಗೆ 2.40 ಲಕ್ಷ ವೆಚ್ಚದಲ್ಲಿ 30 ಡೆಸ್ಕ್ ಹಾಗೂ ಬೆಂಚ್ ನೀಡಲು ಅರಣ್ಯ ಸಮಿತಿ ನಿರ್ಣಯ ಕೈಗೊಂಡಿತ್ತು.
ಬುಧವಾರ ಶಾಲೆಗೆ ತೆರಳಿದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್, ಸದಸ್ಯ ಕಾರ್ಯದರ್ಶಿ ಮಂಜುನಾಥ್ ಮತ್ತು ಸದಸ್ಯರಾದ ಗಣೇಶ್ ಭಟ್ ಮುಖ್ಯೋಪಾಧ್ಯಾಯರಿಗೆ ಪೀಠೋಪಕರಣ ಹಸ್ತಾಂತರ ಮಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್, ಸದಸ್ಯ ವೀರೇಂದ್ರ ಕೂಡ ಶಾಲೆಯ ಶೌಚಾಲಯ, ಅಡುಗೆ ಕೋಣೆ ಮತ್ತಿತರ ಮೂಲಸೌಕರ್ಯಗಳ ಸಮಸ್ಯೆಗಳ ಬಗ್ಗೆ ವಿವರಿಸಿದರು.
