ಕಳಸ:ಪಟ್ಟಣಕ್ಕೆ ಸಮೀಪದ ಕೋಟಿತೀರ್ಥದ ಕೋಟೆಹೊಳೆಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣ ಆಗಿರುವ ಹೊಸ ಸೇತುವೆಯಿಂದ ಮಳೆಗಾಲದಲ್ಲೂ ಸುಗಮ ಸಂಚಾರ ಸಾಧ್ಯವಾಗಿದೆ.
ಮಳೆಗಾಲದ ಆರಂಭದ ಜೂನ್ ತಿಂಗಳಿಂದ ಈ ಸೇತುವೆ ಬಳಸಲು ಜನರು ಶುರು ಮಾಡಿದ್ದರು.ಆದರೆ ಸುರಿಮಳೆಯ ಈ ದಿನಗಳಲ್ಲಿ ಈ ಎತ್ತರದ ಸೇತುವೆಯ ಮಹತ್ವ ಜನರಿಗೆ ಅರ್ಥ ಆಗುತ್ತಿದೆ. ಪಕ್ಕದಲ್ಲೇ ಇರುವ ಹಳೆಯ ಸೇತುವೆ ಮೇಲೆ ಭಾರಿ ಮಳೆಯ ದಿನಗಳಲ್ಲಿ ಭದ್ರಾ ನದಿಯ ನೀರು ಹತ್ತುತ್ತಿತ್ತು. ಇದರಿಂದ ಸಂಚಾರಕ್ಕೆ ತೊಡಕು ಉಂಟಾಗುತ್ತಿತ್ತು. ಜೊತೆಗೆ ಹಳೆ ಸೇತುವೆಯ ಎರಡೂ ಬದಿ ಸುರಕ್ಷತಾ ತಡೆಗೋಡೆ ಮುರಿದು ಬಿದ್ದಿದ್ದವು.

ಈ ಹಿಂದೆ ಇದ್ದ ಸೇತುವೆಯ್ನು 1994ರಲ್ಲಿ 34 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ನಿರ್ಮಾಣ ಮಾಡಿತ್ತು. ಆಗಿನಿಂದಲೂ ನದಿಯ ಆಚೆಗಿನ ಮಕ್ಕಿಮನೆ, ಚಿಕ್ಕೊಡಿಗೆ, ಅಬ್ಬುಗುಡಿಗೆ, ಹೊಸೂರು, ಕೊಳಮಗೆ, ಆನಮಗೆ, ಕಳಕೋಡು ಪ್ರದೇಶಕ್ಕೆ ಸಂಪರ್ಕ ಸಾಧ್ಯವಾಗಿತ್ತು. ಸೇತುವೆ ನಿರ್ಮಾಣದ ನಂತರ ಈ ಗ್ರಾಮಗಳ ಅಭಿವೃದ್ಧಿಯ ಸ್ವರೂಪವೇ ಬದಲಾಗಿತ್ತು.ಆದರೆ ಕೇವಲ 30 ವರ್ಷಕ್ಕೇ ಒಂದು ಸೇತುವೆಯ ಆಯಸ್ಸು ಸೀಮಿತವಾಗಿದ್ದು ಮಾತ್ರ ವಿಪರ್ಯಾಸ ಎಂದು ಗ್ರಾಮಸ್ಥರು ಬೇಸರಪಡುತ್ತಾರೆ.

ಇದೀಗ ಹಳೆಯ ಸೇತುವೆ ಪಕ್ಕದಲ್ಲೇ 6 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹೊಸ ಸೇತುವೆ ನಿರ್ಮಾಣ ಆಗಿದೆ. 100 ಮೀಟರ್ ಉದ್ದದ ಈ ಸೇತುವೆಯ ಜೊತೆಗೆ ಸೇತುವೆಯ ಎರಡೂ ಬದಿ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸುವುದರ ಜೊತೆಗೆ ಎಡದಾಳು ರಸ್ತೆಗೆ ಸಂಪರ್ಕವನ್ನೂ ನೀಡಲಾಗಿದೆ.
