ಆಪ್ತ ಬರಹ: ಚಂದ್ರಮೋಹನ್, ಪ್ರಿನ್ಸ್ ಆಫ್ ಕಳಸ
ಕೊಂಡದಮನೆ ಪದ್ಮರಾಜ್ ರವರು ನಮ್ಮ ಮಾವನಾಗಿದ್ದಕ್ಕಿಂತ ( ತಾಯಿಯವರ ತಮ್ಮ) ನಮ್ಮ ಅತ್ಯುತ್ತಮ ಗೆಳೆಯರಾಗಿದ್ದರು ಎನ್ನುವುದೇ ಹೆಚ್ಚು ಸೂಕ್ತ.
ಹುಟ್ಟುವಾಗಲೇ ಆಗಭ೯ ಶ್ರೀಮಂತ ಕುಟುಂಬದಲ್ಲಿ ಜನಿಸಿ, ಕೊಂಡದ ಮನೆ ಜಿನರಾಜಯ್ಯ ಹಾಗೂ ಪದ್ಮಿಣಿ ಯವರಿಗೆ, ರೋಚಕ ” ಎಂಟ್ರಿ ” ಕೊಟ್ಟಿದ್ದರು ಆಗಿನ ತಮ್ಮ ಕುಟುಂಬಕ್ಕೆ.
ಮೊದಲ ಆರಕ್ಕೆ ಆರೂ ಹೆಣ್ಣು ಮಕ್ಕಳು ಜನಿಸಿದ್ದ ಕುಟುಂಬಕ್ಕೆ, ದೊಡ್ಡ ಜಮೀನ್ದಾರರ ಜವಾಬ್ದಾರಿ ಹೊರಲು ಗಂಡು ಮಗು ಬೇಕೆಂಬ ಆಗಿನ ಕಾಲದಲ್ಲಿ ಇದ್ದ ಪ್ರೊಟೋಕಾಲ್ ಗೆ ತದ್ವಿರುದ್ಧವಾಗಿ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ಹಾಗೂ ಗೌರವ ನೀಡಿದ್ದ ತಂದೆ – ತಾಯಿ ಹಾಗೂ ಮುಖ್ಯವಾಗಿ ಅಜ್ಜ ವೀರಯ್ಯ ನವರು ಹಾಗೂ ಅಜ್ಜಮ್ಮ ಮರುದೇವಿಯಮ್ಮನವರ ಪ್ರೀತಿ ಪಾತ್ರ ಮೊಮ್ಮಗನಾಗಿ ಜನಿಸಿದರು ಇದೇ ಆಗಸ್ಟ್ 14 , 1962 ರಲ್ಲಿ.
ಎಂದಿಗೂ ಕೂಡಾ ತಾತ್ಸಾರಕ್ಕೊಳಗಾಗದೇ ಹಾಗೂ ಆರೂ ಹೆಣ್ಣು ಮಕ್ಕಳು ಎಂಬ ಅಪಹಾಸ್ಯಕ್ಕೂ ಬೀಳದ ಅಕ್ಕಂದಿರು ಅತ್ಯಂತ ಅಕ್ಕರೆಯಿಂದಲೇ ಬೆಳೆಸಿದರು, ಅಪರೂಪಕ್ಕೆ ಹುಟ್ಟಿದವ ಎಂದು.
ಕೊಂಡದಮನೆ ಕುಟುಂಬದಲ್ಲಿ ಆಗಿನ ಕಾಲದಿಂದಲೂ ಬೆಳೆದಿದ್ದ ಒಂದು ಆಚರಣೆ ಎಂದರೆ ” ಎಲ್ಲರಿಗೂ ಮಾತನಾಡಲು ಹಾಗೂ ವ್ಯವಹರಿಸಲು ಸಮಾನ ಅವಕಾಶ ನೀಡುವುದು ಎಂದು. ಚಿಕ್ಕ ಮಗುವಿಗೂ ಅವಕಾಶ ನೀಡುವುದು ಎಂದು ಹಾಗೂ ಎಲ್ಲೂ ಕೂಡಾ ಅಬ್ಬರ – ಪ್ರಚಾರ ಮಾಡಬಾರದು ” ಎಂದು.
ಅಂತೆಯೇ ಬೆಳೆದು ಕೊಂಡು ಬಂದ ಪದ್ಮರಾಜ್ ರವರ ಬೆನ್ನ ಹಿಂದೆಯೇ ಮತ್ತೆರಡು ಸೋದರರು ಜನಿಸಿದರು.
ತಾತ, ತಂದೆ, ಸೋದರರ ಜೊತೆಗೂಡಿ ಕೃಷಿ ಬೆಳೆಸುವುದರಲ್ಲಿ ತಲ್ಲೀನರಾದರು. ಸದಾ ತಮಾಷೆಯಿಂದ ಅವರು ಹೇಳುತ್ತಿದ್ದದು ನಾವು ತೋಟದಲ್ಲಿ – ನಮ್ ಅಕ್ಕಂದಿರು ಒಲೆಯ ಮುಂದೆ ಇನ್ನೂರು ರೊಟ್ಟಿ / ಚಪಾತಿ ಬಡೀತಾ … ತಟ್ಟುತ್ತಾ , ನೀರು ಹೊರುತ್ತಾ, ಲೀಟರ್ ಗಟ್ಟಲೇ ಕಾಫಿ ಮಾಡುತ್ತಾ …… ಇವರ ಶ್ರಮ ಕೂಡ ಸರಿಸಮಾನವಾಗಿ ಇದೆ ಎಂದು.
90 ರ ದಶಕದಲ್ಲಿ ತಾವು ಆರಾಧಿಸುತ್ತಿದ್ದ ” ರೆಬೆಲ್ ಸ್ಟಾರ್ ಅಂಬರೀಶ್ ” ರನ್ನು ಅಪಾರವಾಗಿ ಮೆಚ್ಚಿದ್ದರು. ಅವರನ್ನೇ ಲಿಟರಲಿ ಅನುಕರಣೆ ಮಾಡಿದರು ಗತ್ತು ಹಾಗೂ ಮ್ಯಾನರಿಸಂಗಳಲ್ಲಿ.
1989 ರಲ್ಲಿ ಹಾಸನದ ಕಲ್ಪನರವರನ್ನು ವಿವಾಹವಾಗಿ ಅದ್ಭುತ ಪತಿಯಾದರು. ಜೀವನದುದ್ದಕ್ಕೂ ತಮ್ಮ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಾ, ಗೌರವಿಸುತ್ತಾ, ತಮ್ಮ ಕಾರಿನ ಬಾಗಿಲನ್ನು ತಾವೇ ಇಳಿದು ಪತ್ನಿಗಾಗಿ ತೆಗೆಯುತ್ತಿದ್ದ ದೃಶ್ಯ ನಿಜಕ್ಕೂ ಗಮನಾರ್ಹ 👍🏽
ಜೀವನದಲ್ಲಿ ಅಪಾರವಾಗಿ ಪ್ರೀತಿಸಿದ್ದ ಗೆಳೆಯರು ಹೆಬ್ಳೂರ್ ಧರಣೇಂದ್ರ, ಜೇನುಗೂಡು ಸುರೇಶಣ್ಣ, ಆಳೇಬೈಲು ರಾಜೇಂದ್ರಣ್ಣ, ಬರಗಲ್ ಮಾಣಿಕ್ಯಣ್ಣ, ಭೋಜರಾಜ್, ಯುವರಾಜಣ್ಣ, ಸುಜಿತ್, ಹೊಸೂರು ಯಶೋಧರಣ್ಣ ಕಾಮನಕುಡಿಗೆ ಶ್ರೇಣಿಕಣ್ಣ, ಮಕ್ಕಿ ತಲೆ ವಜ್ರನಾಭಣ್ಣ,ವಧ೯ಮಾನಣ್ಣ,ಬ್ರಹ್ಮಣ್ಣ,ಹಿರೇಬೈಲ್ ಸನತಣ್ಣ/ ವಿಜಯಣ್ಣ ಮುಂತಾದವರು, ಹೀಗೆ ತಮ್ಮದೇ ಪಟಾಲಂ ಸೃಷ್ಟಿಸಿಕೊಂಡು ತುಂಬಾ ಪ್ರೀತಿಯಿಂದ ” ನನ್ನ ಕೂಟಲು” ಎನ್ನುತ್ತಿದ್ದರು. ತಮ್ಮ ಜೀವದ ಗೆಳೆಯರು ಹಾಗೂ ಕುಚ್ಚಿಕ್ಕುಗಳು ಎಂದು ಖುಷಿ ಪಡುತ್ತಿದ್ದರು ಈ ಗ್ಯಾಂಗಿನೊಳಗೆ.
ಕಳಸ ಸುತ್ತಮುತ್ತಲಿನ ಬಹುತೇಕ ಎಲ್ಲಾ ಜೈನ ಬಸದಿ ಗಳಿಗೆ ತನು ಮನ ಧನ ಸಹಾಯ ಮಾಡಿ ಪುಣ್ಯ ಸಂಪಾದಿಸಿದವರು. ಎಲ್ಲಿಯೂ ಕೂಡಾ ಹಣ ನೀಡಿದರು ಅದರಲ್ಲಿ ಕ್ರೆಡಿಟ್ ತಗೊಳ್ಳದೇ ಕೇವಲ ” ತನು – ಮನ ” ನೆಟ್ಟಿದ್ದರು ಅವುಗಳ ಮೇಲೆ.
ಬಾಯಲ್ಲಿ ಬರುತ್ತಿದ್ದ ಮೊದಲ ಪದವೇ ” ಜೈನ ಸಮಾಜ” ಗುನುಗುತ್ತಾ ಕಳಸ ಜೈನ ಸಮುದಾಯ ಭವನ, ಜೈನ ಬಸದಿ, ಬಲಿಗೆ ಜೈನ ಬಸದಿಯ ಮೇಲೆ ಅಪಾರ ಭಕ್ತಿ, ಬದ್ದತೆ ಹಾಗೂ ಗೌರವವಿಟ್ಟಿದ್ದರು.
ಎಷ್ಟೋ ಬಡಜನರಿಗೆ ಎಲ್ಲೆಲ್ಲೂ ಹೇಗೆಲ್ಲೋ ಸಹಾಯ ಮಾಡಿದ್ದರು ಎಂದು ಆಯಾ ಜನಗಳೇ ಆಯಾ ಅಕ್ಕಪಕ್ಕ ಊರಲ್ಲಿ ಹೇಳುವಾಗ ಆಶ್ಚರ್ಯವಾಗುತಿತ್ತು ಹಾಗೂ ಹೆಮ್ಮೆಯೂ ಎನಿಸುತಿತ್ತು.
ಕರಾವಳಿ ಇರಲಿ, ಮಲೆನಾಡಿರಲಿ, ಬಯಲು ಸೀಮೆ ಇರಲಿ, ಉತ್ತರ ಕನಾ೯ಟಕವಿರಲಿ….. ಹೆಚ್ಚಿನ ಕಡೆಗೆ ಯಾವ ಊರಲ್ಲಿ ಯಾವ ಹೋಟೆಲ್, ಯಾವ ಫುಡ್ ಜಾಯಿಂಟ್, ಯಾವ ಐಟಂ ಚೆನ್ನಾಗಿದೆ ಎಂದು ನಿಖರವಾಗಿ ಹೇಳುತ್ತಿದ್ದದ್ದೇ ಇವರು.
ಚಿಕ್ಕ ಗೂಡಂಗಡಿಯೇ ಇರಲಿ, ಸೆವೆನ್ ಸ್ಟಾರ್ ಹೋಟೆಲ್ ಇರಲಿ, ಎಲ್ಲಾ ಕಡೆ ಒಂದೇ ರೀತಿಯ ಆಹಾರ ಪ್ರೀತಿ ಹಾಗೂ ಖಾದ್ಯ ಸವಿಯುತ್ತಿದ್ದ ರೀತಿ ನಿಜಕ್ಕೂ ಮುದ ನೀಡುತಿತ್ತು.” ಅಲ್ಲೊಂದು ಕಡೆಗೆ, ಚಿಕ್ಕ ಗೂಡಂಗಡಿ ಇದೆ ಕಣಾ, ಭಾರೀ ಚೆನ್ನಾಗಿ ಮಾಡ್ತಾರೆ, ಟೇಸ್ಟ್ ಮಾಡು ಒಂದ್ಸಲ ” ಎಂದು ಪಟ್ಟಿ ಕೊಡುತ್ತಿದ್ದ ರೀತಿ ನಿಜಕ್ಕೂ ಅದ್ಭುತ.
ಜೈನರಾಗಿದ್ದರೂ ನೋಡೋಕೆ ಪಕ್ಕಾ ಒಕ್ಕಲಿಗರ ಹಾಗೆ ಗತ್ತು, ಗಾಂಭೀರ್ಯ, ಅಚ್ಚುಕಟ್ಟುತನ, ಶಿಸ್ತು, ಎಲ್ಲವನ್ನೂ ಮೈಗೂಡಿಸಿಕೊಂಡಿದ್ದರು. ಆಗಾಗ ಹೇಳುತ್ತಲೇ ಇದ್ದರು. ಒಕ್ಕಲಿಗರ ಆ ಗುಣ ಚಂದ, ಇದು ಚಂದ, ನೀಟ್ – ಶಿಸ್ತು, ತೋಟ ನಿವ೯ಹಣೆ ಇತ್ಯಾದಿಗಳನ್ನು.

ಕೃಷಿ ವಿಷಯದಲ್ಲಿ ಸೌರವ್ ಗಂಗೂಲಿ ಯಂತೆ ಮುಂದಾಳತ್ವ ವಹಿಸಿದರು. ತಮ್ಮ ಸೋದರನಿಗೆ ಅತ್ಯುತ್ತಮ ಬೆಂಬಲ ನೀಡಿದರು ಕ್ರಿಕೆಟ್ ಪಿಚ್ ನಲ್ಲಿ ಎರಡು ಬ್ಯಾಟ್ಮ್ಯಾನ್ ಗಳಿದ್ದಂತೆ. ಕೃಷಿ ಉಪಕರಣ, ತಂತ್ರಜ್ಞಾನ ಯಾವುದೇ ಆದರೂ ಯಾವುದೇ ಊರಲ್ಲಿದ್ದರೂ ಅಲ್ಲೆಲ್ಲ ಗಾಡಿ ನಿಲ್ಲಿಸಿ, ಉಪಯುಕ್ತ ಮಾಹಿತಿಯನ್ನು ಪಡೆದು, ಅನುಷ್ಠಾನಗೊಳಿಸುತ್ತಿದ್ದರು.
ಜೇನು ಸಾಕಾಣಿಕೆ, ತರಕಾರಿ ಬೆಳೆಯುವ ಪದ್ದತಿ, ದನಕರು ಸಾಕಾಣಿಕೆ, ಶ್ವಾನದಳದ ಮೇಲಿನ ಪ್ರೀತಿ ಎಲ್ಲವೂ ಮಾದರಿಯಾಗಿದ್ದವು. ಚಿಕ್ಕ ಚಿಕ್ಕ ವಿಷಯದಲ್ಲಿ ಕೂಡಾ ಉಪಯುಕ್ತ ಮಾಹಿತಿ ಹಾಗೂ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಆಗಾಗ ರವಿ ಕೆಳಂಗಡಿಯವರ ವಿಷಯ ಪ್ರಸ್ತಾಪಿಸುತ್ತಾ ನನ್ನ ಬಳಿ ಇಂಥ ವಿಷಯದಲ್ಲಿ ಅವರನ್ನೂ ಕೂಡಾ ತುಂಬಾನೇ ಗೌರವಿಸುತ್ತಿದ್ದರು.
ಜೀವನದಲ್ಲಿ ಪ್ರೀತಿಸಿದ ಮತ್ತೆರಡು ಆಪ್ತ ವಸ್ತುಗಳು ಎಂದರೆ ” ಬಂದೂಕು ಹಾಗೂ ಸಿಗರೇಟು ” ಎರಡನ್ನೂ ಗತ್ತಿನಿಂದ ಹಾಗೂ ಸ್ಟೈಲಿನಿಂದ ಬಳಸುತ್ತಿದ್ದ ರೀತಿ ಅವರದ್ದೇ ಆದದ್ದು.
ನಮ್ಮ ಮನೆಯ ಒಳಗೆ ಕುಚಿ೯ಯ ಕೆಳಗೆ ಕುಳಿತು ನೆಲದ ಮೇಲೆ ಸಿಗರೇಟು ಸೇದುತ್ತಾ , ತಮ್ಮ ಪ್ರೀತಿಯ ಭಾವ ನೊಂದಿಗೆ ಹರಟುತ್ತಾ , ನಮ್ಮ ಅಮ್ಮನ ಹತ್ರ ಬೈಸಿಕೊಳ್ಳುತ್ತಾ – ಬುದ್ಧಿವಾದ ಹೇಳಿಸಿ ಕೊಳ್ಳುತ್ತಾ ಪೆದ್ದು ಪೆದ್ದಾಗಿ ” ಕ್ಹಿ ಕ್ಕ್ಹಿ ಕ್ಹಿ ” ಎಂದು ಹಲ್ಲು ಗಿಂಜುತ್ತಾ ನಗುತ್ತಾ ” ಪಾಪ ಅಕ್ಕಯ್ಯ , ಬೈತಿತಾ೯ಳೆ, ಅದು ನನ್ ಕಿವಿಯೊಳಗೆ ಹೋಗೋದೇ ಇಲ್ಲ ” ಎಂದು ನಮ್ಮನ್ನೆಲ್ಲಾ ನೋಡಿ ನಗುತ್ತಾ ಕೊನೆಗೆ ” ಪಾಪ ಟೀ ಕೊಡ್ತಾಳೆ” ಎನ್ನುತ್ತಿದ್ದ ರೀತಿ ತುಂಬಾನೇ ಮೆಚ್ಚತಕ್ಕದ್ದು.
ಚಿಕ್ಕಂದಿನಿಂದಲೂ ಅಪಾರವಾಗಿ ಮೆಚ್ಚಿದ್ದ ” ಮೋಹನ – ವೀರೇಂದ್ರ ರಿಗೆ ” ಎಂದು ಹೇಳಿ ಸೀಬೇಹಣ್ಣು, ಮಾವಿನಕಾಯಿ, ತರಕಾರಿ, ಚಿಕ್ಕು, ಬಾಳೆ ಹಣ್ಣು ಮುಂತಾದವುಗಳನ್ನು ತಾವೇ ಖುದ್ದು ನಿಂತು ಕುಯ್ಯಿಸಿ ಜೀಪಿಗೆ ತುಂಬಿಸಿ ತಂದು ಹೋಂ ಡೆಲಿವರಿ ಕೊಟ್ಟು ತೃಪ್ತಿಯಿಂದ ನಗುತ್ತಿದ್ದರು. ಊಹಿಸಲಿಕ್ಕೂ ಸಾಧ್ಯವಾಗದ ಅದ್ಬುತ ಗುಣ ನಮಗಂತೂ ಇದೇ ಆಗಿದೆ. ಬೇಸಿಗೆ ರಜೆಯ ಮೊದಲ ದಿನವೇ ನಮ್ಮಿಬ್ಬರನ್ನು ಎತ್ತಿಕೊಂಡು ಕೊಂಡದಮನೆಗೆ ಕರೆದುಕೊಂಡು ಬಹಳ ಪ್ರೀತಿಯಿಂದ ಹೋಗುತ್ತಿದ್ದ ರೀತಿ ಬಹಳಷ್ಟು ಮಾದರಿ.
ಎಲ್ಲಾ ಅಕ್ಕಂದಿರು ಹಾಗೂ ಭಾವಂದಿರನ್ನು ಹಾಗೂ ಅವರ ಮಕ್ಕಳೊಂದಿಗೆ ಅವರಿದ್ದ ರೀತಿ ಅದ್ಭುತ ಹಾಗೂ ಅಪರೂಪ. ಭಾವಂದಿರಿಗೆ ಕೊಡುತಿದ್ದ ಗೌರವ ಶ್ರೇಷ್ಠ ದಜೆ೯ಯಲ್ಲಿತ್ತು.
ಕಳಸದ ಮೂರು ಪ್ರಮುಖ ರಾಜಕಾರಣಿಗಳಿಗೆ ಸಮಾನವಾಗಿ ಸ್ಥಾನ ನೀಡಿದ್ದರು.
ರಸ್ತೆಯಲ್ಲಿ ಯಾವುದೇ ವ್ಯಕ್ತಿ ಸಿಕ್ಕರೂ ಕೈ ಎತ್ತಿ ” ನಮ್ಸ್ಕಾರ” ಎಂದು ನಗುತ್ತಾ ವಿಷ್ ಮಾಡುತ್ತಿದ್ದ ರೀತಿ ಇರಲಿ ಅಥವಾ ಚಿಕ್ಕ ಮಕ್ಕಳಿಗೆ ಚಾಕೊಲೇಟ್ ಕೊಡಿಸುತ್ತಾ ನಗುತ್ತಿದ್ದ ರೀತಿ, ಕಾಮಿ೯ಕರಿಗೆ ನಿಂತ ಜಾಗದಲ್ಲೇ ಧನ ಸಹಾಯ ಮಾಡಿ, ಆಟೋ ಚಾರ್ಜ್ ನೀಡಿ ಆಟೋದಲ್ಲೇ ಹೋಗಿ ಎನ್ನುತ್ತಿದ್ದರು ಯಾವುದ್ಯಾವುದೋ ಎಸ್ಟೇಟ್ ಕಾಮಿ೯ಕರುಗಳಿಗೆ,
ಜೀವನದ ಯಾವುದೇ ಹಂತದಲ್ಲೂ ಹೆದರದೆ ಬೆದರದೇ ಧೈರ್ಯದಿಂದ ಕಳೆದರು.
ಅವರ ವೈಯುಕ್ತಿಕ ಯಶಸ್ಸು ತಮ್ಮ ಇಬ್ಬರು ಪುತ್ರಿಯರ ಮೂಲಕ ನೀಡಿ ಹೋದರು. ಇಬ್ಬರೂ ಪುತ್ರಿಯರಿಗೆ ಸರಿಸಮವಾಗಿ ಮಾನ್ಯತೆ, ಗೌರವ ಹಾಗೂ ಆಥಿ೯ಕ ಭದ್ರತೆ ನೀಡಿದರು. ಉತ್ತಮ ಆಥಿ೯ಕ ಸ್ಥಿತಿ ಮುಂದಿನ ಕಾಲಕ್ಕೂ ನೀಡಿ ಗತಿಸಿದರು. ಈಗಿನ ಕಾಲದ ತಂದೆಯರಿಗೆ ಒಂದು ಉತ್ತಮ ಸಂದೇಶ ನೀಡಿ ಹೋದರು. ಮಕ್ಕಳಿಗೆ ಪ್ರೀತಿ ಎಷ್ಟು ಕೊಡುತ್ತೀರಾ ಅಷ್ಟೇ ಉತ್ತಮ ಹಣದ ಭದ್ರತೆ ಕೂಡಾ ನೀಡಿ ಹೋಗಿ ಉತ್ತಮ ಸಂಸ್ಕಾರಗಳ ಜೊತೆಗೆ ಎಂದು.
ಆಸ್ಪತ್ರೆಯಲ್ಲಿ ಐ. ಸಿ. ಯು. ನೊಳಗೆ ನಡೆಸಿದ್ದ ಹೋರಾಟ, ಒಂದೂವರೆ ದಶಕ ಹೃದಯಕ್ಕೆ ಅಳವಡಿಸಿದ್ದ ಸ್ಟಂಟ್ ನೊಂದಿಗೆ ನಂಟಿದ್ದರೂ ಬೆದರದೇ ಧೈರ್ಯದಿಂದ ಇದ್ದದ್ದು, ಕೊನೆಯಗಾಲದಲ್ಲಿ ಶ್ವಾಸಕೋಶದ ಸೋಂಕಿನಿಂದ ಬಳಲಿದಾಗ ವಾಡ್೯ ನಲ್ಲಿ ಹೇಳಿದ್ದ ಮಾತು ” ನಾನು ಮತ್ತೆ ವಾಪಸ್ಸು ಬತೀ೯ನಿ, ಎರಡು ಜ್ಯಾಕೆಟ್ ಎರಡು ಕ್ಯಾಪ್ ಮಂಗಳೂರಿನಲ್ಲಿ ಶಾಪಿಂಗ್ ಮಾಡಿ. ಮತ್ತೆ ವಾಪಸ್ಸು ಸ್ಟೈಲ್ ನಲ್ಲೇ ಬರುತ್ತೀನಿ ” ಎಂದು. ವಾಪಸ್ಸು ಬಾರದಿದ್ದರೂ ಕೆಲವು ಮಾತು, ಹೋರಾಟ, ಛಲ, ದಾನ ಧಮ೯ ಉಳಿಸಿ ಹೋದರು.
ಮುಂದಿನ ಪೀಳಿಗೆಗೆ ಕೆಲವು ಉತ್ತಮ ಸಂದೇಶ ಹಾಗೂ ಯುವಕರಿಗೆ ತಮ್ಮದೇ ರೀತಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ , ಮಾದರಿಯಲ್ಲಿ ಹೇಳಿ ಕೊಟ್ಟರು. ಸಿಗರೇಟು ಸೇದಿ, ಆದರೆ ಮುಖ್ಯವಾಗಿ ಸ್ಟೈಲಲ್ಲಿ ಸೇದಬೇಕು, ಧೈರ್ಯದಿಂದ ಸೇದಬೇಕು. ಆದರೆ ಸಿಗರೇಟು ಸೇದುವುದರ ಜೊತೆಗೆ ನಿಮ್ಮ ಕುಟುಂಬಕ್ಕೆ ದೊಡ್ಡ ಪ್ರಮಾಣದಲ್ಲಿ ಆಥಿ೯ಕ ಭದ್ರತೆ ನೀಡಿ, ನಿಮ್ಮ ಬಂಧುಬಳಗ, ಸಮಾಜ, ದೀನರಿಗೆ ಸಹಾಯ ಮಾಡಿ….. ಇಲ್ಲ ಅಂದ್ರೆ ಸಿಗರೇಟು ಸೇದಬೇಡಿ – ಆರೋಗ್ಯಕ್ಕೆ ಹಾನಿಕರ ಎಂದು !!
