ಹೊರನಾಡು:ಅನ್ನಪೂಣೇಶ್ವರಿ ದೇವಸ್ಥಾನದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಇಂದು ಮಲೆನಾಡಿನಲ್ಲಿ ಒತ್ತುವರಿ ಭೂಮಿ ಖುಲ್ಲಾ ಮಾಡುವ ಸರ್ಕಾರದ ನಿರ್ಧಾರದ ಬಗ್ಗೆ ಬಿಸಿ ಬಿಸಿ ಪ್ರಸ್ತಾಪ ಆಯಿತು.
ಪ್ರಾಸ್ತಾವಿಕ ಮಾತನಾಡಿದ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜಿ.ರಾಮನಾರಾಯಣ ಜೋಷಿ, ಮಲೆನಾಡಿನಲ್ಲಿ ಕೃಷಿಕರ ಭೂಮಿ ಖುಲ್ಲಾ ಮಾಡುವ ಬಗ್ಗೆ ಅರಣ್ಯ ಇಲಾಖೆ ದುಡುಕಿನ ನಿರ್ಧಾರ ಕೈಗೊಂಡಿದೆ. ವರ್ಷಗಳ ಹಿಂದೆ ವಿವಿಧ ಇಲಾಖೆಗಳ ಅಧಿಕಾರಿಗಳು ಕೃಷಿಕರಿಂದ ಲಂಚ ಪಡೆದು ಭೂಮಿ ಒತ್ತುವರಿ ಮಾಡಲು ಅವಕಾಶ ನೀಡಿದ್ದರು.ಈಗ ಇದ್ದಕ್ಕಿದ್ದಂತೆ ಭೂಮಿ ಖುಲ್ಲಾ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.ಹೊರನಾಡು ಸಮೀಪ 48 ಎಕರೆ ತೋಟ ಕಡಿದಿದ್ದಾರೆ. ಇದರಿಂದ ಮಲೆನಾಡಿನ ರೈತರು ಕತ್ತಿ ಹಿಡಿಯುವ ಅಪಾಯ ಇದೆ. ಜನಪ್ರತಿನಿಧಿಗಳು, ಅಧಿಕಾರಗಳ ಜೊತೆಗೆ ಧಾರ್ಮಿಕ ಸಂಸ್ಥೆಗಳು ಕೂಡ ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ಒತ್ತುವರಿ ಖುಲ್ಲಾ ವಿರುದ್ಧ ಹೋರಾಟ ರೂಪಿಸುವುದಿದ್ದರೆ ನಾನು ಕೂಡ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲ ಸಿದ್ಧ. ಸರ್ಕಾರದ ಈ ಬಗೆಯ ನೀತಿಯಿಂದ ಬಹಳ ನೋವಾಗಿದೆ ಎಂದರು.

ರಾಮನಾರಾಯಣ ಜೋಷಿ ಅವರಿಗೆ ಉತ್ತರಿಸಲು ಎಂಬಂತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಮಲೆನಾಡಿನ ಕೃಷಿಕರನ್ನು ಕಂಗೆಡಿಸಿರುವ ಒತ್ತುವರಿ ವಿವಾದದ ಬಗ್ಗೆ ಆತಂಕ ಪಡುವುದು ಬೇಡ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನಾನು ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದು ಅಭಯ ನೀಡಿದರು.
ಅರಣ್ಯ ಮತ್ತು ಕಂದಾಯ ಭೂಮಿಯ ಗೊಂದಲ ಇಡೀ ರಾಜ್ಯದಲ್ಲಿ ಇದೆ. ನಮ್ಮ ಊರಿನಲ್ಲಿ ಕೂಡ ಅರಣ್ಯ ಎಂದು ನಮೂದಾಗಿದ್ದ ಕೃಷಿಕರ ಭೂಮಿಯನ್ನು ಆಗಿನ ಕಂದಾಯ ಸಚಿವ ಅಶೋಕ್ ಕಂದಾಯ ಭೂಮಿಯಾಗಿ ಮಾಡಿಕೊಟ್ಟರು.ಕೃಷಿಕರಿಗೆ ಅಪಾಯ ಆಗದ ಹಾಗೆ ಮಲೆನಾಡಿನ ಕಾಫಿ ತೋಟದ ಭೂವಿವಾದ ಕೂಡ ಬಗೆಹರಿಯಲಿದೆ ಎಂದು ಸೋಮಣ್ಣ ಹೇಳಿದರು.

ಒತ್ತುವರಿ ವಿವಾದದ ಬಗ್ಗೆ ಬಹಳ ಎಚ್ಚರಿಕೆಯಿಂದ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಮನುಷ್ಯ ಮತ್ತು ಪರಿಸರದ ನಡುವೆ ಸಮತೋಲನದ ಅಗತ್ಯ ಇದೆ.ಎಲ್ಲರೂ ಕೂಡಿ ಪರಿಸರ ಉಳಿಸಬೇಕಾಗಿದೆ.ಆದರೂ ಈಗಿನ ಒತ್ತುವರಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಯವರ ಜೊತೆ ನಾನು ಕೂಡ ಜನರ ಪರವಾಗಿ ದನಿಗೂಡಿಸುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕೂಡ ಒತ್ತುವರಿ ಸಮಸ್ಯೆ ಬಗ್ಗೆ ಮಾತನಾಡಿ, ನಮಗೆ ಅನಾದಿ ಕಾಲದಿಂದಲೂ ಕಾಡಿನೊಂದಿಗೆ ಉತ್ತಮ ಸಂಬಂಧ ಇತ್ತು.ಆದರೆ ಈಗ ಅದು ವ್ಯಾವಹಾರಿಕ ಸಂಬಂಧ ಆಗಿದೆ. ಆದರೂ ನಾವೆಲ್ಲರೂ ಪಕ್ಷಾತೀತವಾಗಿ ಬೆಳೆಗಾರರ ಹಿತಾಸಕ್ತಿಯಿಂದ ಕೆಲಸ ಮಾಡುತ್ತೇವೆ. ಯಾರಿಗೂ ಒತ್ತುವರಿ ಖುಲ್ಲಾ ಬಗ್ಗೆ ಆತಂಕ ಬೇಡ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಅನ್ನಪೂರ್ಣೇಶ್ವರಿ ಕ್ಷೇತ್ರವು ಕೃಷಿಕರ ಆರಾಧ್ಯದೇವಿಯ ಕ್ಷೇತ್ರ. ಯಾರಿಗೂ ಸಂಕಟ, ನೋವು ಆಗದಂತೆ, ನೆಮ್ಮದಿ ಕೆಡದ ಹಾಗೆ ಬದುಕುವ ವಾತಾವರಣವನ್ನು ಆಳುವ ವರ್ಗ ರೂಪಿಸಬೇಕು. ಸೂಕ್ತ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
