ಕಳಸ:ಕಾಂಗ್ರೆಸ್ ವಿಚಾರದಲ್ಲಿ ಪಕ್ಷಪಾತ ಧೋರಣೆ ತೋರುತ್ತಿರುವ ರಾಜ್ಯಪಾಲರು ಮುಖ್ಯಮಂತ್ರಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಇರುವ ಹೆಚ್.ಡಿ.ಕುಮಾರಸ್ವಾಮಿ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆಯಂತಹವರು ರಾಜ್ಯಪಾಲರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಅಭಿಪ್ರಾಯಪಟ್ಟರು.
ಕಳಸದಲ್ಲಿ ಭಾನುವಾರ ನಡೆದ ರಾಜ್ಯಪಾಲರ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಕಪ್ಪು ಚುಕ್ಕಿ ಇರದ ಸಿದ್ಧರಾಮಯ್ಯ ಅವರ ಮೇಲೆ ಸುಳ್ಳು ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಬಿಜೆಪಿಗೆ ರಾಜ್ಯಪಾಲರು ಬೆಂಬಲ ನೀಡುತ್ತಿರುವುದರಿಂದ ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಚಳವಳಿ ಆರಂಭಿಸಲಾಗುತ್ತದೆ ಎಂದರು.

ಸರ್ಕಾರದ ಯಾವುದೇ ಏಜೆನ್ಸಿ ವಿಚಾರಣೆ ಇಲ್ಲದೆ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವುದು ದೊಡ್ಡ ಪ್ರಮಾದ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ ಅಭಿಪ್ರಾಯಪಟ್ಟರು.
ಬಹುಮತ ಇರುವ ಸಿದ್ಧರಾಮಯ್ಯ ಸರ್ಕಾರವನ್ನು ಬೀಳಿಸುವ ಯತ್ನವನ್ನು ರಾಜ್ಯಪಾಲರ ಕಚೇರಿ ಮೂಲಕ ಮಾಡಲಾಗುತ್ತಿದೆ. ಬಿಜೆಪಿ ಪಕ್ಷದ ಎಲ್ಲ ಭ್ರಷ್ಟರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ.ಆದರೆ ಬಡವರ ಪರ ಚಿಂತನೆ ಮಾಡುವ ಸಿದ್ಧರಾಮಯ್ಯ ಅವರನ್ನು ಭ್ರಷ್ಟರಂತೆ ಬಿಂಬಿಸಲು ರಾಜ್ಯಪಾಲರ ಮೂಲಕ ಬಿಜೆಪಿ ಯತ್ನಿಸುತ್ತಿದೆ.ಈ ಯತ್ನವನ್ನು ರಾಜ್ಯದ ಜತೆ ಗಮನಿಸಿ, ಖಂಡಿಸಬೇಕು ಎಂದು ಅವರು ಮನವಿ ಮಾಡಿದರು.
ಸರ್ಕಾರವನ್ನು ಪತನ ಮಾಡುವ ಭ್ರಮಾಲೋಕದಿಂದ ಬಿಜೆಪಿ ಹೊರಬರಬೇಕು. ಸಿದ್ಧರಾಮಯ್ಯ ಅವರನ್ನು ಜೈಲಿಗೆ ಕಳಿಸುವ ಅವರ ಯತ್ನಕ್ಕೆ ಜಯ ಸಿಗುವುದಿಲ್ಲ ಎಂದೂ ಅವರು ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶುಕೂರ್ ಮಾತನಾಡಿ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ತಮ್ಮ ಗೌರವ ಕಳೆದುಕೊಳ್ಳುವ ಮುನ್ನ ರಾಜ್ಯಪಾಲರು ಸಿದ್ಧರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲು ನೀಡಿರುವ ಅನುಮತಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಶ್ವನಾಥ್ ಮರಸಣಿಗೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸುಜಿತ್ ಬೆಳ್ಳ, ಶ್ರೀನಿವಾಸ, ಮಹಿಳಾ ಘಟಕದ ಪ್ರೇಮಾ, ಸಂಶುದ್ದೀನ್,ಸುಧಾಕರ್, ಗಣೇಶ್ ಭಟ್, ಸುರೇಶ್ ಭಟ್ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿದ್ಧರಾಮಯ್ಯ ಪರ ಮೆರವಣಿಗೆ ಹಾಗೂ ಕೆಲ ಕಾಲ ರಸ್ತೆ ತಡೆ ನಡೆಸಲಾಯಿತು. ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೇಳಿ ಬಂತು.
