ಕಳಸ:ತೋಟಗಳಿಗೆ ನುಗ್ಗಿ ಜನರಿಗೆ ಅಪಾಯಕಾರಿಯಾಗಿ ವರ್ತಿಸುವ ಕಾಡುಕೋಣಗಳಿಗೆ ಗುಂಡು ಹೊಡೆಯುವುದಾಗಿ ತಾಲ್ಲೂಕಿನ ಕಾಫಿ ಬೆಳೆಗಾರರು ತೀರ್ಮಾನಿಸಿದ್ದಾರೆ.
ಹಳುವಳ್ಳಿ ಸಮೀಪದ ಲಲಿತಾದ್ರಿಯಲ್ಲಿ ಗುರುವಾರ ಬೆಳೆಗಾರರೊಬ್ಬರನ್ನು ಕಾಡಕೋಣ ತಿವಿದು ಸಾಯಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶುಕ್ರವಾರ ಬಂದ್ ಆಚರಿಸಿ ಪ್ರತಿಭಟನಾ ಸಭೆ ನಡೆಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಕೆಸಿಎ ಬ್ಯಾಂಕ್ ಅಧ್ಯಕ್ಷ ಮಂಜಪ್ಪಯ್ಯ, ಮಲೆನಾಡಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ತಪ್ಪಿಸಲು ರಾಜ್ಯ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.ಆದರೆ ಅರಣ್ಯ ಇಲಾಖೆ ಈವರೆಗೂ ವನ್ಯಪ್ರಾಣಿಗಳ ನಿಯಂತ್ರಣಕ್ಕೆ ಸ್ಪಷ್ಟ ಕ್ರಮ ವಹಿಸಿಲ್ಲ. ನಮ್ಮ ತೋಟಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಕಂಡಾಗ ಮಲೆನಾಡಿನ ಎಲ್ಲ ಕೃಷಿಕರೂ ಅವುಗಳಿಗೆ ಗುಂಡು ಹೊಡೆಯುವುದನ್ನು ಶುರು ಮಾಡೋಣ .ಆಗ ಮಾತ್ರ ಸರ್ಕಾರ ನಮ್ಮ ರಕ್ಷಣೆಗೆ ತಕ್ಕ ಕಾನೂನು ರೂಪಿಸುತ್ತದೆ ಎಂದರು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಜನರು ಗುಳೆ ಹೋಗುವ ಸ್ಥಿತಿ ನಿರ್ಮಾಣ ಆಗುತ್ತಿದೆ. ವನ್ಯಜೀವಿಗಳ ಹಾವಳಿ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಹೋರಾಟ ಸಮಿತಿ ರಚನೆ ಮಾಡಿ ಪ್ರಬಲವಾಗಿ ದನಿ ಎತ್ತಬೇಕು.ಇಲ್ಲದಿದ್ದರೆ ಮಲೆನಾಡಿನಲ್ಲಿ ಕೃಷಿಕರಿಗೆ ಉಳಿಗಾಲ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕೃಷಿಕ ಟಿ.ವಿ.ವೆಂಕಟಸುಬ್ಬಯ್ಯ ಮಾತನಾಡಿ, ಕಳೆದ 3 ವರ್ಷದಲ್ಲಿ ಕಾಡುಕೋಣ ಹಾವಳಿಯಿಂದ ಅನೇಕ ಬೆಳೆಗಾರರಿಗೆ ಗಾಯಗಳಾಗಿವೆ. ಮೂವರು ಈಗಾಗಲೇ ಮೃತಪಟ್ಟಿದ್ದಾರೆ. ನಮಗೆ ಕೃಷಿ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ತೋಟಗಳಲ್ಲಿ ಕಾಡುಕೋಣಗಳ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.ಆದ್ದರಿಂದ ತೋಟಕ್ಕೆ ಕಾಡುಕೋಣ ಬಂದರೆ ನಾವು ಗುಂಡು ಹಾರಿಸುತ್ತೇವೆ ಎಂದು ಆಕ್ರೋಶದಿಂದ ನುಡಿದರು.

ಜೆಡಿಎಸ್ ಮುಖಂಡ ಜ್ವಾಲನಯ್ಯ ಮಾತನಾಡಿ, ವನ್ಯಜೀವಿಗಳ ಹಾವಳಿ ಬಗ್ಗೆ ಅಧಿಕಾರಿಗಳಿಗೆ ಜಾಣಕಿವುಡು ಇದೆ. ನಮ್ಮ ಹೋರಾಟ ನಿಲ್ಲಿಸದೆ ಸತತವಾಗಿ ಚಳವಳಿ ರೂಪಿಸಬೇಕಿದೆ. ನಾವು ಜಮೀನಿಗೆ ಹೋಗದಿದ್ದರೆ ಅಧಿಕಾರಿಗಳಿಗೆ ಅನ್ನ ಸಿಗುವುದಿಲ್ಲ ಎಂಬುದನ್ನು ಮರೆಯಬಾರದು ಎಂದೂ ಆಗ್ರಹಿಸಿದರು.
ದೀಪಕ್ ದೊಡ್ಡಯ್ಯ ಮಾತನಾಡಿ, ಮಲೆನಾಡಿನಲ್ಲಿ ಕಾಫಿ ಬೆಳೆಗಾರರು ದೇಶದ ಸಂಪತ್ತಿಗೆ ಕೊಡುಗೆ ಕೊಡುತ್ತಿದ್ದಾರೆ. ಜೊತೆಗೆ ಪರಿಸರ ರಕ್ಷಣೆಯೂ ಆಗುತ್ತಿದೆ.ಲಕ್ಷಾಂತರ ಉದ್ಯೋಗ ಸೃಷ್ಟಿ ಆಗುತ್ತಿದೆ.ಇದನ್ನು ಗಮನಿಸಿ ಸರ್ಕಾರ ಕಾಡುಕೋಣ, ಆನೆ ಹಾವಳಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ಮಲೆನಾಡಿನಲ್ಲಿ ಕಾಫಿ, ಅಡಿಕೆ ನಂಬಿ ಜೀವನ ನಡೆಯುತ್ತಿದೆ. ಕುದುರೆಮುಖದಲ್ಲಿದ್ದ ಕಾಡುಕೋಣಗಳು ಕಳಸ ತಾಲ್ಲೂಕಿನ ಎಲ್ಲ ಕಾಫಿ ತೋಟಕ್ಕೆ ಬಂದಿವೆ. ಅರಣ್ಯ ಇಲಾಖೆಯು ಹುಲ್ಲುಗಾವಲಿನಲ್ಲಿ ಅಕೇಶಿಯಾ ನೆಡುತೋಪು ಮಾಡಿದ ನಂತರ ಅವು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿವೆ ಎಂದರು.
ಮುಖಂಡರಾದ ಪ್ರಭಾಕರ್, ವಿಶ್ವನಾಥ್, ಎಂ.ಬಿ.ಸಂತೋಷ್, ಕೇಶವೇಗೌಡ,ನಾಗಭೂಷಣ್, ರವಿ, ಸುಂದರ ಶೆಟ್ಟಿ ಭಾಗವಹಿಸಿದ್ದರು. ತಹಶೀಲ್ದಾರ್ ಶಾರದಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಆನಂತರ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಅವರಿಗೂ ಕೃಷಿಕರು ಮನವಿ ಸಲ್ಲಿಸಿದರು.ಕಾಡುಕೋಣಗಳ ದಾಳಿಯಿಂದ ಕೃಷಿಕರ ಜೀವಕ್ಕೆ ಅಪಾಯ ಇದ್ದು ಕೃಷಿಕರ ಜೀವ ಉಳಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.ರೈತರ ಪ್ರಾಣ ಹಾನಿ ಮಾಡುತ್ತಾ, ಬೆಳೆ ನಾಶ ಮಾಡುತ್ತಿರುವ ವನ್ಯಮೃಗಗಳನ್ನು ಅರಣ್ಯ ಇಲಾಖೆ ಹಿಡಿದು ದಟ್ಟ ಕಾಡಿಗೆ ರವಾನೆ ಮಾಡಬೇಕು.ತೋಟಗಳಲ್ಲಿ ಬೆಳೆ ಹಾನಿ ಮಾಡುತ್ತಾ ಕೃಷಿಕರ ಜೀವಕ್ಕೆ ಅಪಾಯ ತರುವ ವನ್ಯಮೃಗಗಳಿಗೆ ಗುಂಡು ಹೊಡೆಯಲು ಅನುಮತಿ ಕೊಡಬೇಕು ಎಂದೂ ಸರ್ಕಾರವನ್ನು ಒತ್ತಾಯಿಸಲಾಯಿತು.
