ಕಳಸ:ತೋಟದಲ್ಲಿ ಎದುರಾದ ಕಾಡುಕೋಣದ ದಾಳಿಗೆ ಸಿಕ್ಕಿ ಹಳುವಳ್ಳಿ ಸಮೀಪದಲ್ಲಿ ಕಾಫಿ ಬೆಳೆಗಾರರೊಬ್ಬರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ರತ್ನಗಿರಿಯ ಹಿರಿಯ ಕೃಷಿಕ ರಘುಪತಿ ಹೆಬ್ಬಾರ್ (73) ಬೆಳಿಗ್ಗೆ 11 ಗಂಟೆಗೆ ತೋಟಕ್ಕೆ ಹೋದವರು ಮಧ್ಯಾಹ್ನದವರೆಗೂ ಮನೆಗೆ ಮರಳಲಿಲ್ಲ.ಅವರಿಗೆ ಫೋನ್ ಕರೆ ಮಾಡಿದರೂ ಉತ್ತರ ಕೊಡಲಿಲ್ಲ.ಅವರನ್ನು ಹುಡುಕಿಕೊಂಡು ಮಗ ಬಂದಾಗ ತೋಟದಲ್ಲಿ ಸಾವಿಗೀಡಾಗಿರುವುದು ಕಂಡು ಬಂತು.
ರಘುಪತಿ ಹೆಬ್ಬಾರ್ ಅವರನ್ನು ಕಾಡುಕೋಣ ಸುಮಾರು 50 ಅಡಿಯಷ್ಟು ದೂರ ಎಳೆದುಕೊಂಡು ಹೋಗಿದೆ.ಕೋಣದ ದಾಳಿಯಿಂದ ರಘುಪತಿ ಅವರ ಕೈಕಾಲು ಮುರಿದಂತೆ ಕಂಡು ಬರುತ್ತಿದೆ. ಎದೆ, ಬೆನ್ನು ಮತ್ತು ದೇಹದ ಒಳಗಿನ ಅಂಗಾಗಳಿಗೂ ಏಟಾಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಕಳಸದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕಾಡುಕೋಣಗಳ ಹಾವಳಿ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಕೋಣಗಳನ್ನು ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
