ಕಳಸ:ತಾಲ್ಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಗುರುವಾರ ಬಿಜೆಪಿ ಮುಖಂಡರು ಮನವರಿಕೆ ಮಾಡಿದರು.
ಕಳಸ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ಸಂಸದರು ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.ಆಗ ಮಾತನಾಡಿದ ಬಿಜೆಪಿ ಮುಖಂಡ ಶೇಷಗಿರಿ, ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಸ್ತೆ ತೀರಾ ಹದಗೆಟ್ಟಿದ್ದು ದುಸ್ಥಿತಿಯಲ್ಲಿದೆ.ಪ್ರವಾಸೋದ್ಯಮ ಮತ್ತು ಯಾವುದೇ ದೃಷ್ಟಿಕೋನದಿಂದ ಗಮನಿಸಿದರೂ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲೇಬೇಕು ಎಂದು ಸಂಸದರಿಗೆ ಮನವರಿಕೆ ಮಾಡಿದರು.ಈ ರಸ್ತೆ ದುರಸ್ತಿಗೆ ಕೂಡಲೇ ಕೇಂದ್ರದಿಂದ 25 ಕೋಟಿ ರೂಪಾಯಿ ಮಂಜೂರು ಮಾಡಿಸುವಂತೆ ಶೇಷಗಿರಿ ಕೋರಿದರು.
ಸಂಸೆ-ಎಳನೀರು-ದಿಡುಪೆ ರಸ್ತೆಯ ಅಭಿವೃದ್ಧಿ ಬಗ್ಗೆ, ತಾಲ್ಲೂಕಿನ ಗ್ರಾಮೀಣ ಪ್ರದೇಶದ ಬಿಎಸ್ಎನ್ಎಲ್ ಟವರ್ ಗಳ ಸಮಸ್ಯೆ ಬಗ್ಗೆಯೂ ಅವರು ಸಂಸದರಿಗೆ ಮಾಹಿತಿ ನೀಡಿದರು.

ಕುದುರೆಮುಖ ಟೌನ್ಶಿಪ್ ಪಾಳುಬಿದ್ದಿದ್ದು ಅದನ್ನು ಯಾವುದಾದರೂ ಕ್ಷೇತ್ರಕ್ಕೆ ಬಳಸಿಕೊಳ್ಳಬೇಕು. ಕಳಸದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಬೇಕು ಎಂದು ಸಂಸದರನ್ನು ಶೇಷಗಿರಿ ಕೋರಿದರು.
ಸಂಸದರಿಗೆ ಮನವಿ ಸಲ್ಲಿಸಿದ ಬಿಜೆಪಿ ಮುಖಂಡರು, ಕಳಸ ತಾಲ್ಲೂಕಿನ ಕೃಷಿಕರಿಗೆ ಬೆಳೆ ವಿಮೆ ಸಮಪರ್ಕವಾಗಿ ಪಾವತಿ ಆಗಿಲ್ಲ.ಜೊತೆಗೆ ಬ್ಯಾಂಕುಗಳಲ್ಲಿ ಬೆಳೆಗಾರರ ಸಾಲದ ಒಂದೇ ಕಂತಿನ ತೀರುವಳಿ ಬಗ್ಗೆ ಬ್ಯಾಂಕುಗಳಿಗೆ ಸೂಚನೆ ಕೊಡುವಂತೆಯೂ ಮನವಿ ಮಾಡಿದರು.
ಮುಖಂಡರಾದ ದೀಪಕ್ ದೊಡ್ಡಯ್ಯ, ನಾಗಭೂಷಣ್, ಶ್ರೀಕಾಂತ್, ಮಹೇಶ್, ಕಳಸ ಪಂಚಾಯಿತಿ ಅಧ್ಯಕ್ಷೆ ಉಷಾ ಭಾಗವಹಿಸಿದ್ದರು.
