ಕಳಸ:ಇಲ್ಲಿನ ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘಕ್ಕೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇದರೊಂದಿಗೆ ಹಾಲಿ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಸತತ 6ನೇ ಅವಧಿಗೆ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.
ಸಾಲಗಾರರ ಸಾಮಾನ್ಯ ಕ್ಷೇತ್ರಗಳಿಗೆ ಜಿ.ಕೆ.ಮಂಜಪ್ಪಯ್ಯ, ಅನಿಲ್ ಗ್ಯಾವಿನ್ ಡಿಸೋಜ, ನಾರಾಯಣ ನೂಜಿ, ಜಗದೀಶ್ ನೆಲ್ಲಿಬೀಡು ಮತ್ತು ಮಹೇಶ್ ಎಡದಾಳು ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ.
ಹಿಂದುಳಿದ ವರ್ಗದ ಎ ಕ್ಷೇತ್ರಕ್ಕೆ ಕೆ.ಹೆಚ್.ದೇಜಪ್ಪ ಮತ್ತು ಹಿಂದುಳಿದ ವರ್ಗದ ಬಿ ಕ್ಷೇತ್ರಕ್ಕೆ ಹೊರನಾಡಿನ ಮಧುವನ್ ಜೈನ್ ಆಯ್ಕೆ ಆಗಿದ್ದಾರೆ.ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರಕ್ಕೆ ರತಿ ರವೀಂದ್ರ ಮತ್ತು ಪರಿಶಿಷ್ಟ ವರ್ಗದ ಕ್ಷೇತ್ರಕ್ಕೆ ಬೇಡಕ್ಕಿ ಕೃಷ್ಣಪ್ಪ ಆಯ್ಕೆ ಆಗಿದ್ದಾರೆ.
ಮಹಿಳೆಯರ ಮೀಸಲು ಕ್ಷೇತ್ರಕ್ಕೆ ಆಶಾಲತಾ ಡಿ. ಜೈನ್ ಮತ್ತು ಗಾಯತ್ರಿ ಮಕ್ಕಿಮನೆ ಆಯ್ಕೆ ಆಗಿದ್ದಾರೆ. ಸಾಲಗಾರರು ಅಲ್ಲದ ಕ್ಷೇತ್ರಕ್ಕೆ ನೂಜಿ ರಾಜೇಂದ್ರ ಆಯ್ಕೆ ಆಗಿದ್ದಾರೆ ಎಂದು ಸಂಘದ ಚುನಾವಣಾ ಅಧಿಕಾರಿ ಜ್ಯೋತಿ ಲಕ್ಷ್ಮಿ ತಿಳಿಸಿದ್ದಾರೆ.
ಈ ಪೈಕಿ ಮಹೇಶ್, ದೇಜಪ್ಪ ಮತ್ತು ಮಧುವನ್ ಕಾಂಗ್ರೆಸ್ ಪಾಳೆಯದ ನಿರ್ದೇಶಕರಾಗಿದ್ದಾರೆ. ಕೃಷ್ಣಪ್ಪ, ಜಗದೀಶ್ ಮತ್ತು ರಾಜೇಂದ್ರ ಬಿಜೆಪಿ ಹಿನ್ನೆಲೆಯವರು. ಅನಿಲ್ ಡಿಸೋಜ, ಆಶಾಲತಾ ಜೈನ್, ರತಿ ರವೀಂದ್ರ, ಗಾಯತ್ರಿ ಮಕ್ಕಿಮನೆ, ನಾರಾಯಣ ನೂಜಿ ಸೇರಿದಂತೆ 6 ನಿರ್ದೇಶಕರು ಜೆಡಿಎಸ್ ಹಿನ್ನೆಲೆ ಮತ್ತು ಮಂಜಪ್ಪಯ್ಯ ಅವರ ಆಪ್ತ ವಲಯದವರೇ ಆಗಿದ್ದಾರೆ.
ಸುಮಾರು 500 ಕೋಟಿ ವ್ಯವಹಾರ ನಡೆಸುವ ಕಳಸ ಸಹಕಾರ ಸಂಘಕ್ಕೆ ಸತತ 6ನೇ ಬಾರಿಗೆ ಮಂಜಪ್ಪಯ್ಯ ಅಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಖಚಿತ ಆಗಿದೆ.ಇದೇ 26ರ ಗುರುವಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಆ ಚುನಾವಣೆಯ ಫಲಿತಾಂಶ ಈಗಲೇ ತಿಳಿದಿರುವುದರಿಂದ ಈ ಬಗ್ಗೆ ಹೆಚ್ಚಿನ ಕುತೂಹಲ ಉಳಿದಿಲ್ಲ.
