ರವಿ ಕೆಳಂಗಡಿ
ಕಳಸ:ಕಾಳುಮೆಣಸಿನ ಕೊಯ್ಲು ನಡೆಯುತ್ತಿದ್ದು ತಾಲ್ಲೂಕಿನಲ್ಲಿ ಈ ವರ್ಷದ ಉತ್ಪಾದನೆ ಕಳೆದ ವರ್ಷದ ಅರ್ಧಕ್ಕಿಂತಲೂ ಕಡಿಮೆ ಎಂಬ ಸತ್ಯ ಬೆಳೆಗಾರರ ಅನುಭವಕ್ಕೆ ಬರುತ್ತಿದೆ.ಜಾಗತಿಕವಾಗಿ ಕೂಡ ಮೆಣಸಿನ ಬೆಳೆ ಪ್ರಮಾಣ ಕುಸಿಯುತ್ತಿದ್ದು ಧಾರಣೆ ಏರುಮುಖವಾಗುವ ನಿರೀಕ್ಷೆ ಬೆಳೆಗಾರರು ಮತ್ತು ವ್ಯಾಪಾರಿ ವಲಯದಲ್ಲಿದೆ.
ಕಳೆದ ಬೇಸಿಗೆಯ ಅಧಿಕ ಉಷ್ಣಾಂಶ ಮತ್ತು ಮಳೆಗಾಲದ ಅಧಿಕ ತೇವಾಂಶದಿಂದಾಗಿ ಬಳ್ಳಿಗಳಲ್ಲಿ ಮೆಣಸಿನ ಫಸಲೇ ವಿರಳವಾಗಿದೆ.ಮಳೆಗಾಲದ ನಂತರ ಮಿಲಿಬಗ್ ಕೀಟಗಳ ಹಾವಳಿಯಿಂದ ಬಹಳಷ್ಟು ಬಳ್ಳಿಗಳು ಸಾಯುತ್ತಿವೆ.
ಜಗತ್ತಿನ ಶೇ.38ರಷ್ಟು ಮೆಣಸು ಬೆಳೆಯುವ ವಿಯೆಟ್ನಾಂ ದೇಶದಲ್ಲಿ ಕೂಡ ಹವಾಮಾನ ವೈಪರೀತ್ಯದಿಂದ ಮೆಣಸಿನ ಫಸಲಿನ ಏರಿಕೆ ಆಗಿಲ್ಲ. ಕಾಫಿ ಮತ್ತು ಡೂರಿಯನ್ ಬೆಳೆಗಳ ಬೆಲೆ ಏರಿಕೆಯಿಂದ ಮೆಣಸಿನ ಬಗ್ಗೆ ಅಲ್ಲಿ ಕೂಡ ಆಸಕ್ತಿ ಕಡಿಮೆ ಆಗುತ್ತಿದೆ.
ಬ್ರೆಜಿಲ್ ದೇಶವು ಜಗತ್ತಿನ ಶೇ.18 ಮೆಣಸು ಬೆಳೆಯುತ್ತದೆ.ಆದರೆ ಅಲ್ಲಿ ಮೆಣಸಿನ ಉತ್ಪಾದನೆ ಕಡಿಮೆ ಆಗುತ್ತಿದೆ. ಭಾರತದಲ್ಲಿ ಜಗತ್ತಿನ ಶೇ.12 ಮೆಣಸು ಬೆಳೆದರೂ ಆಂತರಿಕ ಬಳಕೆಗೆ ಮೆಣಸು ಸಾಕಾಗುತ್ತಿಲ್ಲ.
2023 ಮತ್ತು 2024ರ ಉತ್ತಮ ಫಸಲಿನ ನಂತರ ಇಂಡೋನೇಶಿಯಾ ಮತ್ತು ಶ್ರೀಲಂಕಾದಲ್ಲಿ ಈ ವರ್ಷ ಫಸಲಿನ ಪ್ರಮಾಣ ಕಡಿಮೆ ಆಗಿದೆ.ಅಲ್ಲಿನ ಬೆಳೆಗಾರರ ಬಳಿ ಕಳೆದ ವರ್ಷದ ಸರಕು ಕೂಡ ಉಳಿದಿಲ್ಲ. ಕೋಕೋ ಬೆಳೆ ಬಗ್ಗೆ ಅಲ್ಲಿ ಆಕರ್ಷಣೆ ಶುರು ಆಗಿದೆ.
‘ನಮ್ಮ ತೋಟದಲ್ಲಿ ಕಳೆದ ವರ್ಷ 20 ಕಾರ್ಮಿಕರು 21 ದಿನ ಮೆಣಸು ಕೊಯ್ದಿದ್ದರು. ಈ ವರ್ಷ 20 ಜನರು ಒಂದು ವಾರದಲ್ಲೇ ಕೊಯ್ದು ಮುಗಿಸಿದ್ದಾರೆ’ ಎಂದು ಲಿಂಬೆಕೊಂಡದ ಬೆಳೆಗಾರ ಚಂದ್ರಶೇಖರ್ ಹೇಳುವಾಗ ಫಸಲು ಅತ್ಯಂತ ಕಡಿಮೆ ಇದೆ ಎಂಬ ಅರ್ಥ ಧ್ವನಿಸುತ್ತದೆ.
ಚೈನಾದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯುವ ಮೆಣಸು ಆಂತರಿಕ ಬಳಕೆಗೆ ಸಾಕಾಗದೆ ಅದು ಕೂಡ ಆಮದು ಮಾಡುತ್ತಿದೆ. ಈ ವರ್ಷದ ಆ ದೇಶದ ಆಮದು ಪ್ರಮಾಣದ ಆಧಾರದ ಮೇಲೆ ಮೆಣಸಿನ ಧಾರಣೆ ಏರುವ ನಿರೀಕ್ಷೆ ಇದೆ.
10 ವರ್ಷಗಳ ಹಿಂದೆ 2015ರಲ್ಲಿ 5,87,000 ಟನ್ ಇದ್ದ ಜಾಗತಿಕ ಮೆಣಸಿನ ಉತ್ಪಾದನೆ ಈ ವರ್ಷ 4,86,000 ಟನ್ ಮಟ್ಟಕ್ಕೆ ಕುಸಿಯುವ ಅಂದಾಜು ಇದೆ. ಈ ಹಿನ್ನೆಲೆಯಲ್ಲಿ ಮೆಣಸಿನ ಧಾರಣೆ ಏರಬಹುದು ಎಂದು ಬೆಳೆಗಾರರು ದೃಢವಾಗಿ ನಂಬಿದ್ದಾರೆ. ಪರಿಣಾಮವಾಗಿ ಮೆಣಸಿನ ಮಾರುಕಟ್ಟೆಗೆ ಫಸಲು ಬರುತ್ತಲೇ ಇಲ್ಲ.
