ಕಳಸ:ಸಂಸೆ ಗ್ರಾಮದ ನೆಲ್ಲಿಬೀಡು ಪ್ರದೇಶದ ಕತ್ತಡಕದಲ್ಲಿ ಕಾಡುಕೋಣಗಳ ಹಾವಳಿ ಬಗ್ಗೆ ಸ್ಥಳೀಯರು ಕಂಗಾಲಾಗಿದ್ದಾರೆ.
ಅಲ್ಲಿನ ತೋಟಗಳಲ್ಲಿ ಕಾಡುಕೋಣಗಳು ಸತತವಾಗಿ ದಾಳಿ ಮಾಡುತ್ತಿದ್ದು ಅಡಿಕೆ, ಕಾಫಿ ಗಿಡಗಳನ್ನು ನಾಶ ಮಾಡುತ್ತಿವೆ. ಗ್ರಾಮಗಳಲ್ಲಿ ಭಯದ ವಾತಾವರಣ ಮೂಡಿದೆ ಎಂದು ಹಳ್ಳಿಗರು ದೂರಿದ್ದಾರೆ.
‘ನಮ್ಮ ತೋಟಗಳಿಗೆ ಬರುವ ಕಾಡುಕೋಣಗಳು ಫಸಲಿಗೆ ಬಂದಿರುವ ಅಡಿಕೆ, ಕಾಫಿ ಗಿಡಗಳನ್ನು ಮುರಿದು ಹಾಳು ಮಾಡುತ್ತಿವೆ. ಈ ಬಗ್ಗೆ ಕುದುರೆಮುಖ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದರೆ ಕಳಸದ ಅರಣ್ಯ ಇಲಾಖೆಗೆ ಮಾಹಿತಿ ಕೊಡಲು ಹೇಳುತ್ತಾರೆ. ಕಾಡುಕೋಣ ಮತ್ತು ಕಡವೆಗಳು ಯಾರಿಗೆ ಸೇರುತ್ತವೆ ಎಂದು ನಮಗೆ ಗೊತ್ತಿಲ್ಲ. ಆದರೆ ನಮ್ಮ ಸಮಸ್ಯೆ ಬಗೆಹರಿಸಿ’ ಎಂದು ಕತ್ತಡಕದ ವರ್ಧಮಾನ್ ಹೇಳುತ್ತಾರೆ.
‘ಕಾಡುಕೋಣಗಳು ಪ್ರತಿದಿನ ನಮ್ಮ ತೋಟಗಳಿಗೆ ಗುಂಪಿನಲ್ಲಿ ಬರುತ್ತವೆ. ಬಂದಾಗಲೆಲ್ಲ 15-20 ಗಿಡಗಳನ್ನು ಪುಡಿ ಮಾಡುತ್ತಿವೆ. ಇದರಿಂದ ತೋಟಕ್ಕೆ ಕಾರ್ಮಿಕರು ಕೂಡ ಬರುತ್ತಿಲ್ಲ. ಶಾಲಾ ಮಕ್ಕಳು ಮತ್ತು ಸ್ಥಳೀಯರು ಕೂಡ ಕಾಡುಕೋಣಗಳ ಹಾವಳಿಯಿಂದ ಹೆದರಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ನಮಗೆ ಸೂಕ್ತ ಪರಿಹಾರ ಕೊಡಬೇಕು’ ಎಂದು ಸ್ಥಳೀಯ ಕೃಷಿಕ ನಿರಂಜನ್ ಒತ್ತಾಯಿಸುತ್ತಾರೆ.
