ಕಳಸ: ಫಾರಂ ನಂಬರ್ 53ರಲ್ಲಿ ಭೂಮಿಯ ಹಕ್ಕು ಪತ್ರ ರದ್ದಾಗಿರುವ ಬಗ್ಗೆ ಕಾನೂನು ಹೋರಾಟ ರೂಪಿಸಲು ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಳಸ ರೈತ ಹಿತರಕ್ಷಣಾ ವೇದಿಕೆಯು ಪಟ್ಟಣದಲ್ಲಿ ಭಾನುವಾರ ನಡೆಸಿದ ಸಭೆಯಲ್ಲಿ ಒಮ್ಮತದಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕಳೆದ 2 ದಶಕಗಳಿಂದ ಫಾರಂ ನಂಬರ್ 53ರಲ್ಲಿ ನೂರಾರು ರೈತರಿಗೆ ಭೂಮಿಯ ಹಕ್ಕು ನೀಡಲಾಗಿತ್ತು. ಇದನ್ನು ಕಾನೂನು ಬದ್ಧವಾಗಿ ಆಯಾ ಕಾಲದ ಶಾಸಕರ ನೇತೃತ್ವದ ಸಮಿತಿ ಶಿಫಾರಸ್ಸಿನ ಮೇಲೆಯೇ ಮಾಡಲಾಗಿದೆ. ಹೀಗೆ ಕಾನೂನು ಬದ್ಧವಾಗಿಯೇ ಮಂಜೂರಾದ ಭೂಮಿಯ ಹಕ್ಕನ್ನು ಏಕಾಏಕಿ ರದ್ದುಪಡಿಸಿರುವುದು ಕಾನೂನಿನ ಪ್ರಕಾರ ಸರಿಯಲ್ಲ ಎಂದು ಅನೇಕ ಮುಖಂಡರು ಭಾಗವಹಿಸಿದ್ದ ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ದಶಕದಿಂದ ಈ ಭೂಮಿಯಲ್ಲಿ ಕಾಫಿ, ಅಡಿಕೆ, ಮೆಣಸು ಬೆಳೆಸಿದ್ದ ರೈತರಿಗೆ ಫಸಲು ಕೈಗೆ ಬರುವ ಸಂದರ್ಭದಲ್ಲಿ ಭೂಮಿ ಬಿಡಲು ಆದೆಶ ಮಾಡಲಾಗುತ್ತಿದೆ. ಈ ಬಗ್ಗೆ ಹೋರಾಟ ಪಕ್ಷಾತೀತ ಹೋರಾಟ ಅನಿವಾರ್ಯ ಎಂದೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಡೀ ರಾಜ್ಯದಲ್ಲೇ ಇಂತಹ ಸಾವಿರಾರು ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಕಡೂರು, ಮೂಡಿಗೆರೆ, ಕಳಸ ತಾಲ್ಲೂಕಿನಲ್ಲಿ ಮಾತ್ರ ಹಕ್ಕುಪತ್ರ ರದ್ದು ಮಾಡಲಾಗಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ದಾವೆ ಹೂಡಲು ಅವಕಾಶ ಇದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾನೂನು ತಜ್ಞ, ಹಿರಿಯ ಬೆಳೆಗಾರ ಲಕ್ಷ್ಮಣ ಕುಮಾರ್ ಅಭಿಪ್ರಾಯಪಟ್ಟರು.
ಮುಖಂಡ ಮಂಜಪ್ಪಯ್ಯ ಮಾತನಾಡಿ, ಕಳಸ ತಾಲ್ಲೂಕಿನ ರೈತರಿಗೆ ಮಂಜೂರಾದ ಹಕ್ಕುಪತ್ರಗಳನ್ನು ಕೂಡ ರದ್ದು ಮಾಡಲಾಗಿದೆ. ಈ ಹಕ್ಕುಪತ್ರಗಳ ಆಧಾರದಲ್ಲಿ ಬ್ಯಾಂಕುಗಳು ಲಕ್ಷಗಟ್ಟಲೆ ಸಾಲ ಕೂಡ ಕೊಟ್ಟಿವೆ. ಆದ್ದರಿಂದ ಕಾನೂನು ಹೋರಾಟದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.

ಕಾಂಗ್ರೆಸ್ ಮುಖಂಡ ಕೆ.ಆರ್.ಪ್ರಭಾಕರ್ ಮಾತನಾಡಿ, ರೈತರ ಉಳಿವಿಗೆ ತುರ್ತು ಕ್ರಮ ಆಗಲೇಬೇಕು ಎಂದರು.ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಭೂಮಿ ಹಕ್ಕು ಕಳೆದುಕೊಂಡ ಕೆಲವು ರೈತರಿಗೆ ಹೈಕೋಟಿನಲ್ಲಿ ತಡೆಯಾಜ್ಞೆ ಸಿಕ್ಕಿದೆ ಎಂಬುದು ಸಮಾಧಾನದ ಸಂಗತಿ. ಕರ್ನಾಟಕ ಆಡಳಿತ ಟ್ರಬ್ಯೂನಲ್ ನಲ್ಲಿ ಕೂಡ ಕೆಲವು ರೈತರಿಗೆ ತಡೆಯಾಜ್ಞೆ ಸಿಕ್ಕಿದೆ ಎಂದರು.
ವಕೀಲ ಅನಂತೇಶ್ ಮಾತನಾಡಿ, ಕೃಷಿಕರಿಂದ ಸಣ್ಣಪುಟ್ಟ ತಪ್ಪು ಆಗಿದೆ.ಆದರೆ ಎಲ್ಲ ಮಾಹಿತಿ ಇದ್ದ ಅಧಿಕಾರಿಗಳು ಯಾಕೆ ತಪ್ಪು ಮಾಡಿದರು ಎಂಬುದು ಯಕ್ಷಪ್ರಶ್ನೆ.ಭೂಕಂದಾಯ ಕಾಯ್ದೆಗೆ ಸರಿಯಾದ ತಿದ್ದುಪಡಿ ಮಾಡದೆ ಇರುವುದರಿಂದ ಬಹಳಷ್ಟು ಗೊಂದಲ ಆಗುತ್ತಿದೆ ಎಂದರು.
ಮುಖಂಡರಾದ ಕೆ.ಸಿ.ಧರಣೇಂದ್ರ, ವೆಂಕಟಸುಬ್ಬಯ್ಯ, ಕಲ್ಲಾನೆ ನರೇಂದ್ರ, ರಂಗನಾಥ್ ಭಾಗವಹಿಸಿದ್ದರು.
ಹಕ್ಕುಪತ್ರ ರದ್ದಾದ ಎಲ್ಲ ರೈತರು ಕೂಡ ಕಾನೂನಿನ ಮೊರೆ ಹೋಗಲು ಅಗತ್ಯ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು.
