ಕಳಸ:’ಸೇತುವೆಯ ಪಕ್ಕದ ತಡೆಗೋಡೆ ಕೆಲಸ, ಮಣ್ಣು ತುಂಬುವ ಕೆಲಸ ಮತ್ತು ಸಂಪರ್ಕ ರಸ್ತೆ ಕಾಮಗಾರಿ ಆರಂಭಿಸಿಲ್ಲ. 10 ದಿನದೊಳಗೆ ಮಳೆಗಾಲ ಆರಂಭ ಆಗುತ್ತದೆ. ಇದರಿಂದ ಈ ವರ್ಷದ ಮಳೆಗಾಲದ ಒಳಗೆ ಸೇತುವೆ ಕೆಲಸ ಮುಗಿಯುವುದು ಅಸಾಧ್ಯವಾಗಿದೆ. ಕಳೆದ ಒಂದು ತಿಂಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಾಪಸ್ ಹೋಗಿದ್ದಾರೆ.ಎಲ್ಲ ಸಲಕರಣೆಗಳು ಕೂಡ ಸ್ಥಳದಿಂದ ವಾಪಸ್ ಹೋಗಿದೆ. ಈ ವರ್ಷಕ್ಕೂ ನಮಗೆ ತಲೆ ಹೊರೆ, ಕಾಲುಸಂಕ ಅನಿವಾರ್ಯ’ ಎಂದು ಕೊಣೆಗೋಡು ಗ್ರಾಮದ ಯುವಕ ಮಾಲತೀಶ್ ನೋವಿನಿಂದ ಹೇಳುತ್ತಾರೆ.
ಸಂಸೆ ಗ್ರಾಮದ ಎಸ್. ಕೆ.ಮೇಗಲ್ ಪ್ರದೇಶದ ಕೊಣೆಗೋಡು ಸೇತುವೆ ಕಾಮಗಾರಿ ಸಕಾಲಕ್ಕೆ ಮುಗಿಯದೆ ಗ್ರಾಮಸ್ಥರಲ್ಲಿ ಸಹಜವಾಗಿಯೇ ನಿರಾಸೆ ಉಂಟಾಗಿದೆ. ಕೊಣೆಗೋಡು ಪ್ರದೇಶದ ನಿವಾಸಿಗಳಿಗೆ ಮಳೆಗಾಲದಲ್ಲಿ ಸಂಪರ್ಕ ಸೇತುವೆ ಇಲ್ಲದೆ ದ್ವೀಪದಂತಹ ಪ್ರದೇಶದಲ್ಲಿ ಜೀವನ ನಡೆಸುವ ಬಗ್ಗೆ ವಾಯ್ಸ್ ಆಫ್ ಕಳಸ ಕಳೆದ ವರ್ಷ ವರದಿ ಪ್ರಕಟಿಸಿತ್ತು.
ಇದನ್ನು ಗಮನಿಸಿ ಶಾಸಕಿ ನಯನಾ ಮೋಟಮ್ಮ ತುರ್ತಾಗಿ ಸೇತುವೆ ಕಾಮಗಾರಿಗೆಂದು 50 ಲಕ್ಷ ರೂಪಾಯಿ ಮಂಜೂರು ಮಾಡಿಸಿದ್ದರು. ಆರಂಭಿಕ ಹಂತದಲ್ಲಿ ಕಾಮಗಾರಿ ಕೂಡ ಚುರುಕಾಗಿ ನಡೆದಿತ್ತು. ಮಳೆಗಾಲಕ್ಕೂ ಮುನ್ನವೇ ಸೇತುವೆ ಕೆಲಸ ಮುಗಿದು ಈ ಮಳೆಗಾಲದಲ್ಲಿ ಬಳಕೆಗೆ ಸಿಗುವ ಬಗ್ಗೆ ಗ್ರಾಮಸ್ಥರಲ್ಲಿ ನಿರೀಕ್ಷೆ ಮೂಡಿತ್ತು. ಆದರೆ ಕಳೆದ ಒಂದು ತಿಂಗಳಿಂದ ಕಾಮಗಾರಿ ನಿಂತು ಹೋಗಿದೆ. ಆದ್ದರಿಂದ ಸಕಾಲಕ್ಕೆ ಕೆಲಸ ಮುಗಿಯುವ ಅನುಮಾನದಿಂದ ಜನರಲ್ಲಿ ಬೇಸರ ಉಂಟಾಗಿದೆ.
