ಕಳಸ:ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ ಮಾಡಿಸಲೇಬೇಕಿದ್ದ ಕಳಸ ತಾಲ್ಲೂಕು ಮತ್ತು ಆಸುಪಾಸಿನ ಜನರಿಗೆ ಸಮಾಧಾನಕರ ಸುದ್ದಿ ಬಂದಿದೆ.ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಕಾರ್ಯಾರಂಭಿಸಿದ್ದು ಶಾಸಕಿ ನಯನಾ ಮೋಟಮ್ಮ ಮಂಗಳವಾರ ಉದ್ಘಾಟಿಸಿದರು.
ಆಸ್ಪತ್ರೆಯಲ್ಲಿ ಈಗಾಗಲೇ ಎರಡು ಸುಸಜ್ಜಿತ ಡಯಾಲಿಸಿಸ್ ಯಂತ್ರಗಳು ಕೆಲಸ ಮಾಡುತ್ತಿವೆ. ನುರಿತ ಸಿಬ್ಬಂದಿ ಕೂಡ ಇದ್ದಾರೆ.ಪ್ರತದಿನ 8 ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೌಲಭ್ಯ ಇಲ್ಲಿದೆ.
ಈವರೆಗೂ ಡಯಾಲಿಸಿಸ್ ಮಾಡಿಸಿಕೊಳ್ಳಲು ದೂರದ ಊರಿನ ಆಸ್ಪತ್ರೆಗೆ ಹೋಗುತ್ತಿದ್ದ ರೋಗಿಗಳಿಗೆ ಇದು ವರದಾನ ಆಗಲಿದೆ.ಜೊತೆಗೆ ರೋಗಿಗಳಿಗೆ ಹಣದ ಉಳಿತಾಯ ಕೂಡ ಆಗಲಿದೆ.
ಉದ್ಘಾಟನೆಯ ನಂತರ ಶಾಸಕಿ ನಯನಾ ಮೋಟಮ್ಮ ಕಳಸ ಆಸ್ಪತ್ರೆಯ ವೈದ್ಯ ಮತ್ತು ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು.ಆಸ್ಪತ್ರೆಯಲ್ಲಿ ಇರುವ ಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ವೈದ್ಯ ಡಾ.ಮಂಜುನಾಥ್ ಮಾತನಾಡಿ, ಖಾಯಂ ಹಿರಿಯ ವೈದ್ಯರು ಆಸ್ಪತ್ರೆಯಲ್ಲಿ ಇದ್ದರೆ ಇನ್ನಷ್ಟು ಆತ್ಮವಿಶ್ವಾಸದಿಂದ ಕೆಲಸ ಮಾಡಬಹುದು.ಮರಣೋತ್ತರ ಪರೀಕ್ಷೆ, ಹೆರಿಗೆ ಮಾಡಲಾರದೆ ಸಮಸ್ಯೆ ಆಗುತ್ತಿದೆ ಎಂದರು.
ಆರೋಗ್ಯ ಸಿಬ್ಬಂದಿ ಮಾತನಾಡಿ, ರೋಗಿಗಳಿಗೆ ತುರ್ತು ಸೇವೆ ನೀಡಲು ಇನ್ನಷ್ಟು ಆರೋಗ್ಯ ಸಹಾಯಕಿಯರು ಮತ್ತು ಫಾರ್ಮಾಸಿಸ್ಟ್ ಸಿಬ್ಬಂದಿ ನೇಮಕ ಆಗಬೇಕು ಎಂದು ಗಮನ ಸೆಳೆದರು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಮಾತನಾಡಿ, ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕ ಮಾಡಿ ಅವರನ್ನೇ ಆಡಳಿತ ವೈದ್ಯಾಧಿಕಾರಿ ಮಾಡಿದರೆ ಆಸ್ಪತ್ರೆಯ ಆಡಳಿತ ಸುಸೂತ್ರವಾಗುತ್ತದೆ ಎಂದರು.
ಬಡ ಗರ್ಭಿಣಿಯರು ದೂರದ ಸರ್ಕಾರಿ ಆಸ್ಪತ್ರೆಗೆ ಹೋಗಲಾರದೆ ಖಾಸಗಿ ಆಸ್ಪತ್ರೆಯನ್ನೇ ಆಶ್ರಯಿಸಿದ್ದಾರೆ.ಆದ್ದರಿಂದ ಕಳಸ ಆಸ್ಪತ್ರೆಗೆ ಸ್ತ್ರೀರೋಗ ತಜ್ಷೆಯ ನೇಮಕ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಡಿಜಿಟಲ್ ಎಕ್ಸ್ರೇ ಅಳವಡಿಸಬೇಕು ಎಂಬ ಮನವಿಗೆ ಶಾಸಕಿ ಈಗಾಗಲೇ ಈ ಬಗ್ಗೆ ಹಣ ಒದಗಿಸಲಾಗಿದೆ ಎಂದರು.ಈ ಆಸ್ಪತ್ರೆಯಿಂದ ಯಾರನ್ನೂ ಕೂಡ ವರ್ಗಾವಣೆ ಅಥವಾ ಬೇರೆಡೆಗೆ ನಿಯೋಜನೆ ಮಾಡುವುದಿಲ್ಲ ಎಂದೂ ಭರವಸೆ ನೀಡಿದರು.
ಖಾಯಂ ವೈದ್ಯರ ನೇಮಕದ ಬಗ್ಗೆ ಕಳೆದ ಒಂದು ವರ್ಷದಿಂದ ಸತತವಾಗಿ ಪ್ರಯತ್ನ ಮಾಡುತ್ತಿದ್ದೇವೆ.ಆದರೆ ಕಳಸದಲ್ಲಿ ಕೆಲಸ ಮಾಡಲು ವೈದ್ಯರಿಗೆ ಆಸಕ್ತಿ ಇಲ್ಲ.ಆದರೂ ವೈದ್ಯರನ್ನು ಮತ್ತು ಅಗತ್ಯ ಸಿಬ್ಬಂದಿ ನೇಮಿಸುವ ಪ್ರಯತ್ನ ಸಾಗಿದೆ ಎಂದು ನಯನಾ ಮೋಟಮ್ಮ ಹೇಳಿದರು.
ಕಳಸ ಪಂಚಾಯಿತಿ ಅಧ್ಯಕ್ಷೆ ಉಷಾ, ಸದಸ್ಯ ವೀರೇಂದ್ರ, ಮುಖಂಡರಾದ ಪ್ರಭಾಕರ್, ರಾಜೇಂದ್ರ,ರಫೀಕ್, ಶ್ರೇಣಿಕ, ವಿಶ್ವನಾಥ್, ಲಕ್ಷ್ಮಣಾಚಾರ್, ಕೆ.ಎಲ್.ವಾಸು ಇದ್ದರು.
