ಕಳಸ:ಪಟ್ಟಣದಲ್ಲಿ ಬುಧವಾರ ನಡೆದ ಕಳಸ ಮತ್ತು ಮೂಡಿಗೆರೆ ತಾಲ್ಲೂಕುಗಳ ತ್ರೆಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಜನಪರ ಆಡಳಿತದ ಅವಿರತ ಪ್ರಯತ್ನಕ್ಕೆ ಸ್ಪಷ್ಟ ನಿದರ್ಶನಗಳು ಸಿಕ್ಕವು.
ಸಭೆಯಲ್ಲಿ ಕೆಡಿಪಿ ಸದಸ್ಯ ಅಬ್ದುಲ್ ಶುಕೂರ್ ಮಾತನಾಡಿ, ತಿಂಗಳಿಗೆ ೨ ಲಕ್ಷ ರೂಪಾಯಿ ನಿರ್ವಹಣಾ ವೆಚ್ಚವನ್ನು ಪಾವತಿಸಿದರೂ ಕಳಸಕ್ಕೆ ಹೊನ್ನೆಕಾಡು ನೀರು ತಲುಪುತ್ತಿಲ್ಲ ಎಂದು ದೂರಿದರು. ಆಗ ಶಾಸಕಿ ನಯನಾ ಮೋಟಮ್ಮ, ಕಳಸ ಪಟ್ಟಣಕ್ಕೆ ನೀರು ಪೂರೈಸುವ ಹೊನ್ನೆಕಾಡು ಯೋಜನೆಯ ನಿರ್ವಹಣೆ ಸಮಸ್ಯೆ ಸರಿಪಡಿಸಿ ಒಂದು ವಾರದೊಳಗೆ ನೀರು ಸರಬರಾಜು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ಗೆ ತಾಕೀತು ಮಾಡಿದರು.
ಶಾಸಕಿಯ ಖಡಕ್ ಮಾತಿಗೆ ಎಂಜಿನಿಯರ್ ನಾಗರಾಜ್ ಮೂರು ದಿನದಲ್ಲಿ ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು.ಬರ ಪರಿಹಾರ ಕಾರ್ಯಕ್ರಮದ ಬೋರ್ವೆಲ್ಗಳ ಕೆಲಸವನ್ನೂ ಕೂಡ ಈವರೆಗೂ ಯಾಕೆ ಮುಗಿಸಿಲ್ಲ ಎಂದೂ ಶಾಸಕಿ ಇದೇ ಎಂಜಿನಿಯರ್ ಅವರಲ್ಲಿ ಅಸಮಾಧಾನ ಹೊರಹಾಕಿದರು.
ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ಭೂಮಿ ಒತ್ತುವರಿ ಆದ ಬಗ್ಗೆ ಆಡಳಿತಾಧಿಕಾರಿ ಶಾಸಕಿಯ ಗಮನ ಸೆಳೆದರು. ಮೂಡಿಗೆರೆ ಪಟ್ಟಣದ ಪ್ರಮುಖ ಆಸ್ತಿ ಒತ್ತುವರಿ ಆಗಿದ್ದನ್ನು ಸಹಿಸುವುದಿಲ್ಲ ಎಂದ ಶಾಸಕಿ, ಕೂಡಲೇ ಆಸ್ಪತ್ರೆಯ ಭೂಮಿಯ ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ ರಾಜಶೇಖರ್ ಅವರಿಗೆ ಸೂಚಿಸಿದರು.
ಮೂಡಿಗೆರೆ ಕ್ಷೇತ್ರದ ೧೨೦ ಅಂಗನವಾಡಿ ಕೇಂದ್ರಗಳ ದುರಸ್ತಿ ಆಗಬೇಕಿದೆ, ೧೯ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬುದನ್ನು ಶಿಶು ಕಲ್ಯಾಣ ಅಧಿಕಾರಿ ಶಾಸಕರ ಗಮನ ಸೆಳೆದರು.
ಆಗ ಶಾಸಕಿ ಅಂಗನವಾಡಿಗಳ ದುರಸ್ತಿ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಮುಗಿಸಬೇಕು ಎಂದು ಎಂಜಿನಿಯರ್ಗೆ ಸೂಚಿಸಿದರು.

ಕೆಡಿಪಿ ಸದಸ್ಯ ರಫೀಕ್, ಈ ವರ್ಷದ ತಾಲ್ಲೂಕು ಪಂಚಾಯಿತಿಯ ಅನುದಾನ ವಾಪಸ್ ಹೋಗಿದೆ ಎಂದು ದೂರಿದರು. ಆಗ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಈ ಅನುದಾನದ ಮೊದಲ ಕಂತಿಗೆ ನಮ್ಮ ಕಚೇರಿಯಿಂದಲೇ ಕ್ರಿಯಾ ಯೋಜನೆ ಮಾಡಿದ್ದೆವು.ಆದರೆ ಎರಡನೇ ಕಂತು ಬರುವಾಗ ವಿಳಂಬ ಆಗಿತ್ತು.ಮುಂದಿನ ಬಾರಿ ಯಾವುದೇ ಕಾರಣಕ್ಕೂ ಅನುದಾನ ವಾಪಸ್ ಹೋಗದಂತೆ ಎಚ್ಚರವಹಿಸಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರ ಚೀಟಿ ತಿದ್ದುಪಡಿ ಮತ್ತಿತರ ಕೆಲಸಕ್ಕೆ ಕಳಸಕ್ಕೆ ವಾರದಲ್ಲಿ ೨ ದಿನ ಫೂಡ್ ಇನ್ಸ್ಪೆಕ್ಟರ್ ಬರಬೇಕು ಎಂಬ ಶುಕೂರ್ ಅವರ ಬೇಡಿಕೆಗೆ ಕೂಡಲೇ ಸ್ಪಂದಿಸಿದ ಶಾಸಕಿ ಈ ಬಗ್ಗೆ ತಹಶೀಲ್ದಾರ್ಗೆ ಸೂಚನೆ ನೀಡಿದರು.
ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸಂಖ್ಯೆ ಕಡಿಮೆ ಆಗಬಾರದು. ಯಾವುದೇ ವೈದ್ಯ, ಸಿಬ್ಬಂದಿ ನಡವಳಿಕೆಯಿಂದ ಜನರಿಗೆ ನೋವು, ಅನಾನುಕೂಲ ಆಗಬಾರದು ಎಂದು ನಯನಾ ಮೋಟಮ್ಮ ಸ್ಪಷ್ಟವಾಗಿ ಹೇಳಿದರು. ಹೊರನಾಡು, ಬಾಳೆಹೊಳೆ, ಹಿರೇಬೈಲ್ ಸೇರಿದಂತೆ ಕ್ಷೇತ್ರದ ೬ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ ಎಂಬ ತಾಲ್ಲೂಕು ವೈದ್ಯಾಧಿಕಾರಿ ಮಾಹಿತಿಯಿಂದ ಶಾಸಕಿ ಬೇಸರಗೊಂಡರು.
ಒಂದು ವರ್ಷ ಗ್ರಾಮೀಣ ಸೇವೆಗೆ ಬಂದ ವೈದ್ಯರು ವಾಪಸ್ ತೆರಳಿರುವ ಬಗ್ಗೆ ಮಾಹಿತಿ ಪಡೆದರು. ಪರ್ಯಾಯ ವ್ಯವಸ್ಥೆ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ಶಾಸಕಿ ಹೇಳಿದರು.
ಮೂಡಿಗೆರೆ ಮಿನಿವಿಧಾನಸೌಧದ ಆವರಣ ಕೊಳಕಾಗಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಿದೆ ಎಂದು ಕೆಡಿಪಿ ಸದಸ್ಯ ಅಶ್ವಥ್ ದೂರಿದಾಗ, ನೀವು ಕೆಲಸ ಮಾಡುವ ಎಲ್ಲ ಸರ್ಕಾರಿ ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮುರಿದಿದ್ದು ಒಂದು ವಾರದಿಂದಲೂ ವಿದ್ಯುತ್ ಪೂರೈಕೆ ಇಲ್ಲ ಎಂಬ ದೂರು ಬರುತ್ತಿವೆ ಎಂದು ನಯನಾ ಮೋಟಮ್ಮ ಮೆಸ್ಕಾಂ ಅಧಿಕಾರಿಗಳ ವಿವರಣೆ ಕೋರಿದರು. ನೂರಾರು ಕಂಬಗಳು ಬಿದ್ದಿರುವುದರಿಂದ ಕೆಲ ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಕಳಸ ಮೆಸ್ಕಾಂ ಎಂಜಿನಿಯರ್ ಚೇತನ್ ಹೇಳಿದರು.
ಮುಂದಿನ ೩ ದಿನದಲ್ಲಿ ವಿದ್ಯುತ್ ಕಂಬ ಅಳವಡಿಸಿ ಎಲ್ಲೆಡೆ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಮಾಡಬೇಕು ಎಂದು ಶಾಸಕಿ ಇದೇ ಸಂದರ್ಭದಲ್ಲಿ ಕಳಸ ಮತ್ತು ಮೂಡಿಗೆರೆ ಮೆಸ್ಕಾಂ ಎಂಜಿನಿಯರ್ಗಳಿಗೆ ಸೂಚನೆ ನೀಡಿದರು.
ಬೆಳೆ ವಿಮೆ ಪಾವತಿಸಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎಂದು ರಫೀಕ್ ಹಾಗೂ ಅಶ್ವಥ್ ಗಮನ ಸೆಳೆದಾಗ ತೋಟಗಾರಿಕಾ ಇಲಾಖೆ ಮತ್ತು ಕಂದಾಯ ಇಲಾಖೆ ಜವಾಬ್ದಾರಿಗಳ ಬಗ್ಗೆ ಶಾಸಕಿ ಸುದೀರ್ಘ ಚರ್ಚೆ ನಡೆಸಿದರು.
ಹಿರೇಬೈಲ್ ಶಾಲೆ ಸೇರಿದಂತೆ ಸರ್ಕಾರಿ ಶಾಲೆಗಳ ಕಟ್ಟದ ದುರಸ್ತಿ ಬಗ್ಗೆ ತುರ್ತು ಕ್ರಮ ವಹಿಸುವಂತೆ ಶಾಸಕಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗೆ ಸೂಚಿಸಿದರು.ಮೂಡಿಗೆರೆ ತಾಲ್ಲೂಕಿನಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿ ಗಮನ ಸೆಳೆದಾಗ ಅವರು, ಗುತ್ತಿಗೆ ಆಧಾರದಲ್ಲಿ ಇನ್ನಷ್ಟು ಶಿಕ್ಷಕರ ನೇಮಕಾತಿ ಸಾಧ್ಯವೇ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಳಿ ಚರ್ಚಿಸುತ್ತೇನೆ ಎಂದರು.
ಸಂಸೆಯಲ್ಲಿ ನಿವೇಶನಕ್ಕಾಗಿ ಜನರು ದಶಕದಿಂದ ಕಾದಿದ್ದಾರೆ. ೬ ಎಕರೆ ಭೂಮಿ ಮಂಜೂರು ಮಾಡಲು ಅರಣ್ಯ ಮತ್ತು ಕಂದಾಯ ಇಲಾಖೆ ನಡುವಣ ಸಂವಹನ ಚುರುಕಾಗಿ ನಡೆಯಬೇಕು ಎಂದೂ ಶಾಸಕಿ ನಯನಾ ಮೋಟಮ್ಮ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ಮತ್ತು ತಹಶೀಲ್ದಾರ್ ಬಸವರಾಜ್ ಅವರಿಗೆ ಸೂಚಿಸಿದರು.
ಅತಿವೃಷ್ಟಿಯಿಂದ ಹಾನಿ ಆದ ತೋಟಗಳಿಗೆ ಕೂಡಲೇ ತೆರಳಿ ವರದಿ ಸಲ್ಲಿಸಬೇಕು ಎಂದು ಅವರು ತೋಟಗಾರಿಕಾ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆ ಬಗ್ಗೆ ಮತ್ತು ತಡೆಗೋಡೆಗಳ ನಿರ್ಮಾಣದ ಬಗ್ಗೆ ನಾನು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇನೆ ಎಂದೂ ಶಾಸಕಿ ತಿಳಿಸಿದರು.
೩ ಗಂಟೆಗಳ ಕಾಲ ನಡೆದ ಸಭೆಯುದ್ದಕ್ಕೂ ಶಾಸಕಿ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಜನಪರ ಕೆಲಸ ಮಾಡುವ ಪ್ರೇರಣೆ ನೀಡಿದರು. ತಮ್ಮ ಆಪ್ತ ಸಹಾಯಕರ ತಂಡದ ಮೂಲಕ ಅತಿ ವಿಸ್ತಾರದ ಮೂಡಿಗೆರೆ ಕ್ಷೇತ್ರದ ವಿವಿಧ ಸಮಸ್ಯೆ, ಬೇಡಿಕೆಗಳ ಸ್ಪಷ್ಟ ಅಧ್ಯಯನ ಮಾಡಿದವರಂತೆ ಶಾಸಕಿ ನಯನಾ ಮೋಟಮ್ಮ ಸಭೆಯಲ್ಲಿ ಕಂಡು ಬಂದರು.
ಬಹುತೇಕ ಅಧಿಕಾರಿಗಳಿಗೆ ಮೂರು ತಿಂಗಳ ನಂತರ ನಡೆಯುವ ಮುಂದಿನ ಕೆಡಿಪಿ ಸಭೆಯ ಒಳಗೆ ಬಾಕಿ ಕೆಲಸ ಮುಗಿಸಿಕೊಂಡು ಬರಬೇಕು ಎಂದು ಗಟ್ಟಿ ದನಿಯಲ್ಲಿ ಗಡುವನ್ನೂ ನೀಡಿದರು.
