ಕಳಸ:ಕಳಸದ ವೈಶಿಷ್ಟ್ಯವೇ ಆದ ಪ್ರತಿವರ್ಷವೂ ನಡೆಯುವ ಗಿರಿಜಾ ಕಲ್ಯಾಣ ಮಹೋತ್ಸವ ಇಂದು ಬೆಳಗಿನ ಜಾವ ವಿಧಿವತ್ತಾಗಿ ನೆರವೇರಿತು.
ಕಳೆದ ಶನಿವಾರದಿಂದ ಆರಂಭಗೊಂಡಿದ್ದ ವಿವಾಹದ ವಿಧಿಗಳು ಸಂಪ್ರದಾಯಬದ್ಧವಾಗಿ ನ ಡೆದಿದ್ದವು.ಗಣಪತಿ ಪೂಜೆ, ಅಂಕುರಾರ್ಪಣೆ, ಕೌತುಕೋತ್ಸವ, ಧ್ವಜಾರೋಹಣದಲ್ಲಿ ವಿಧಿವತ್ತಾಗಿ ನಡೆದಿದ್ದವು. ಸುಪ್ರದಕ್ಷಿಣೆ ಸೇವೆಯನ್ನು ಉಪಾಧ್ಯಾಯರ ಸಂಘವು ನಿರ್ವಹಣೆ ಮಾಡಿತ್ತು.

ದೇವರ ವಿವಾಹಕ್ಕೆ ಭಕ್ತರು ಹಸಿರು ಕಾಣಿಕೆ ಸಮರ್ಪಿಸಿ ಭಕ್ತಿ ಭಾವ ತೋರಿದ್ದರು. ವಿವಾಹಕ್ಕೆ ಬರುವಂತೆ ಪಟ್ಟಣದ ಮನೆಗಳಿಗೆ ದೇವಸ್ಥಾನದ ಸಿಬ್ಬಂದಿ ಅಕ್ಷತೆ ಹಂಚಿ ಕರೆಯೋಲೆ ನೀಡಿದ್ದರು.ಮದುವೆಯ ದಿನವಾದ ಮಂಗಳವಾರ ಕಳಸೇಶ್ವರ ಸ್ವಾಮಿಗೆ ಶತವಾರ ರುದ್ರಾಭಿಷೇಕ, ರಂಗಪೂಜೆ ನಡೆದಿತ್ತು. ಗಿರಜಾಂಬಾ ದೇವಸ್ಥಾನದಲ್ಲೂ ಬಗೆ ಬಗೆಯ ಅಲಂಕಾರ, ಪೂಜೆ ನೆರವೇರಿ ವಧುವನ್ನು ವಿವಾಹಕ್ಕೆ ಸಜ್ಜುಗೊಳಿಸಲಾಗಿತ್ತು.
ಗಿರಿಜೆಯನ್ನು ಕಳಸೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡ ನಂತರ ಬೆಳಗಿನ ಜಾವ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ಮಹೋತ್ಸವ ನೆರವೇರಿತು. ಪ್ರತಿವರ್ಷವೂ ಕಳಸದಲ್ಲಿ ನಡೆಯುವ ಕಲ್ಯಾಣ ವೀಕ್ಷಿಸಲು ಬೇರೆ ಬೇರೆ ಊರುಗಳಿಂದ ಭಕ್ತರು ಬಂದಿದ್ದರು.

ಕಳಸೇಶ್ವರನೊಂದಿಗೆ ಗಿರಿಜೆಯು ಗರ್ಭಗುಡಿಯಲ್ಲಿ ಕಂಗೊಳಿಸುತ್ತಿದ್ದ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲು ಭಕ್ತರು ದೇವಸ್ಥಾನಕ್ಕೆ ಲಗುಬಗನೆ ಬಂದರು.
ಮಧ್ಯಾಹ್ನ ದೇವರ ವಿವಾಹ ಮಹೋತ್ಸವದ ಭೋಜನವನ್ನು ಕೂಡ ಭಕ್ತರು ಸವಿದರು.
