ಕಳಸ:ಜಿಲ್ಲಾಡಳಿತವು ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ಥಳೀಯರು ತರಹೇವಾರಿ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆದರು.
ಪ್ರಾಸ್ತಾವಿಕ ಮಾತಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್,ಕಳಸ ಹೊಸ ತಾಲ್ಲೂಕು ಆಗಿದ್ದು ಆಡಳಿತಾತ್ಮಕವಾಗಿ ತಾಲ್ಲೂಕು ಕೇಂದ್ರದ ಅನುಷ್ಟಾನ ಕಷ್ಟದ ಕೆಲಸ ಆಗಿದೆ.ತಾಲ್ಲೂಕು ಕೇಂದ್ರಕ್ಕೆ ಭೂಮಿ ದೊರಕಿಸುವ ಕೆಲಸವೇ ಕಗ್ಗಂಟಾಗಿದೆ ಎಂದು ಒಪ್ಪಿಕೊಂಡರು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ವಿವಿಧ ಇಲಾಖೆಗಳ ಕಚೇರಿ ತೆರೆಯದೆ, ತಾಲ್ಲೂಕು ಮಟ್ಟದ ಸಿಬ್ಬಂದಿ ಬಾರದೆ ಕಳಸ ತಾಲ್ಲೂಕು ಕೇಂದ್ರ ಎನ್ನುವುದು ವಿಫಲ ಮಾದರಿ ಆಗಿದೆ.ಕನಿಷ್ಟ ಪಕ್ಷ ವಾರದಲ್ಲಿ 2-3 ದಿನ ವಿವಿಧ ಇಲಾಖೆಗಳ ಅಧಿಕಾರಿಗಳು ಕಳಸಕ್ಕೆ ಬರುವಂತೆ ಜಿಲ್ಲಾಧಿಕಾರಿ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಒಪ್ಪಿದ ಜಿಲ್ಲಾಧಿಕಾರಿ ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂದಿನ 3 ದಿನದಲ್ಲಿ ಕಳಸಕ್ಕೆ ನಿಯೋಜನೆ ಆಗುವ ಸಿಬ್ಬಂದಿಗಳ ಪಟ್ಟಿ ಕಳಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಕೃಷ್ಣ ಮಾತನಾಡಿ, ಕಳಸದ ಅಭಿವೃದ್ಧಿ ಬಗ್ಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕಿದೆ.ನಿರ್ದಿಷ್ಟ ದಿನದಂದು ಕಳಸಕ್ಕೆ ಬಂದು ಇಲ್ಲಿನ ಜನರ ಕೆಲಸ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಫಾರಂ ನಂಬರ್ 53ರ ಅಕ್ರಮ ಮಂಜೂರಾತಿ ರದ್ದು ಪಡಿಸುವ ವಿಚಾರದಲ್ಲಿ ಬಡ ರೈತರಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದು ಜ್ವಾಲನಯ್ಯ ಕೋರಿದರು.ಕಳಸದಲ್ಲಿ ಆಹಾರ ನಿರೀಕ್ಷಕರು ವಾರಕ್ಕೊಂದು ದಿನ ಬಂದು ಪಡಿತರ ಚೀಟಿಯ ಎಲ್ಲ ಸಮಸ್ಯೆ ಸರಿಪಡಿಸಬೇಕು ಎಂದು ಸಂತೋಷ್ ಹಿನಾರಿ ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಬೀಡಾಡಿ ಜಾನುವಾರುಗಳ ಹಾವಳಿಯಿಂದ ಕೃಷಿ ಭೂಮಿ ಮತ್ತು ಸುಗಮ ಸಂಚಾರಕ್ಕೆ ಧಕ್ಕೆ ಆಗಿದೆ ಎಂದು ಹಿತ್ಲಮಕ್ಕಿ ರಾಜೇಂದ್ರ ಗಮನ ಸೆಳೆದರು. ಕಳಸದಲ್ಲಿ ಗೋಶಾಲೆಗೆ ಜಾಗ ಮಂಜೂರು ಮಾಡಬೇಕು ಎಂದು ರಂಗನಾಥ್ ಮನವಿ ಮಾಡಿದರು.
ಇನಾಂ ಭೂಮಿ ಸಮಸ್ಯೆ ಬಗ್ಗೆ ಟಿ.ವಿ ವೆಂಕಟಸುಬ್ಬಯ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಿವಾಸಿಗಳ ಸಮಸ್ಯೆ ಬಗ್ಗೆ ಸುರೇಶ್ ಭಟ್ ಗಮನ ಸೆಳೆದರು.ಗೋಪಾಲ ಶೆಟ್ಟಿ ಕಳಸದ ಮಹಾವೀರ ರಸ್ತೆ ಅವ್ಯವಸ್ಥೆ, ಕಲ್ಮಕ್ಕಿಗೆ ವಿದ್ಯುತ್ ಪೂರೈಕೆ ಸರಿ ಇಲ್ಲದ ಬಗ್ಗೆ ಮತ್ತು ತಾಲ್ಲೂಕಿನಲ್ಲಿ ಕಂದಾಯ ಭೂಮಿ ಅತಿಕ್ರಮಣ ಆಗಿರುವ ಬಗ್ಗೆ ಬೊಟ್ಟು ಮಾಡಿದರು.

ಕಳಸ-ಕೊಟ್ಟಿಗೆಹಾರ ರಸ್ತೆ ಬದಿ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು. ಕಳಸ ತಾಲ್ಲೂಕಿನ ವಸತಿರಹಿತರಿಗೆ ಭೂಮಿ ಇದ್ದರೂ ನಿವೇಶನ ಮಂಜೂರು ಆಗಿಲ್ಲ ಎಂದು ಗಮನ ಸೆಳೆದರು.
ಲಕ್ಷ್ಮಣಾಚಾರ್ ಮಾತನಾಡಿ, ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಇಲ್ಲದೆ ಬಡ ರೋಗಿಗಳಿಗೆ ಅನ್ಯಾಯ ಆಗುತ್ತಿದೆ. ಕಳಸ ತಾಲ್ಲೂಕು ಕಚೇರಿಯಮಿನಿ ವಿಧಾನಸೌಧವನ್ನು ಈಗಿನ ನಾಡ ಕಚೇರಿ ಸ್ಥಳದಲ್ಲೇ ನಿರ್ಮಾಣ ಮಾಡಬೇಕು ಎಂದರು.
ಅನಿಲ್ ಮುಜೇಕಾನು ಬುಡಕಟ್ಟು ಕೃಷಿಕರ ಸಹಕಾರ ಸಂಘಕ್ಕೆ ಭೂಮಿ ಮಂಜೂರು ಆಗಿಲ್ಲ ಎಂದು ದೂರಿದರು.ಬೀಡಾಡಿ ಜಾನುವಾರುಗಳನ್ನು ಕಳಿಸಲು ಗೋಶಾಲೆಯೇ ಇಲ್ಲ ಎಂದು ವಿಶ್ವನಾಥ್ ಮರಸಣಿಗೆ ದೂರಿದರು.
ಉಪವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ನಿವೇಶನಗಳ ಹಕ್ಕುಪತ್ರ ವಿತರಣೆ ಸದ್ಯದಲ್ಲೇ ಶಾಸಕರ ಉಪಸ್ಥಿತಿಯಲ್ಲಿ ನಡೆಯುತ್ತದೆ.ಕಳಸೇಶ್ವರ ದೇವಸ್ಥಾನದ ಭೂಮಿ ಒತ್ತುವರಿ ಆಗಿದ್ದರೆ ಕೂಡಲೇ ತೆರವು ಮಾಡಲಾಗುವುದು ಎಂದರು.
ತಹಶೀಲ್ದಾರ್ ಮಂಜುನಾಥ್, ಕಳಸ ಪಂಚಾಯಿತಿ ಅಧ್ಯಕ್ಷೆ ಉಷಾ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
