ಕಳಸ:ವರ್ಷದ ೨ ತಿಂಗಳು ಶ್ರಮವಹಿಸಿ ಅಡಿಕೆ ಸಂಸ್ಕರಣೆ ಮಾಡುವುದನ್ನು ರೈತರು ಬಿಟ್ಟಿರುವುದರಿಂದ ನಮ್ಮ ಲಾಭಾಂಶ ದಳ್ಳಾಳಿಗಳ ಪಾಲು ಆಗುತ್ತಿದೆ ಎಂದು ಬೆಳೆಗಾರ ಕೆ.ಸಿ.ಧರಣೇಂದ್ರ ಅಭಿಪ್ರಾಯಪಟ್ಟರು.
ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಇಳಿಸಂಜೆ ಹೊತ್ತು ಮತ್ತು ಬೆಳಗಿವ ಜಾವ ಅಡಿಕೆ ಸಂಸ್ಕರಣೆ ಕೆಲಸ ಮಾಡಲು ರೈತರು ಉದಾಸೀನ ತೋರುತ್ತಿದ್ದಾರೆ.ಇದರ ಪರಿಣಾಮ ಹಸಿ ಅಡಿಕೆಯನ್ನೇ ಮಾರಾಟ ಮಾಡುತ್ತಿದ್ದೇವೆ. ಕೆಂಪುಅಡಿಕೆಗೆ ಬೆಲೆ ಇದ್ದಾಗ ರೈತರ ಬಳಿ ಮಾಲು ಇಲ್ಲದೆ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ಉಂಟಾಗಿದೆ ಎಂದು ಅವರು ವಿಶ್ಲೇಷಿಸಿದರು.
ಕಳಸ ಸಹಕಾರ ಸಂಘವು ಅಡಿಕೆ ಮತ್ತು ಕಾಫಿ ಸಂಸ್ಕರಣಾ ಘಟಕ ಆರಂಭಿಸುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಕಳಸ ಸಹಕಾರ ಸಂಘ ಕಾಫಿ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.
ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ಕಳಸ ಸಹಕಾರ ಸಂಘದಿAದ ರೈತರಿಗೆ ಎಲ್ಲ ಬಗೆಯ ಸವಲತ್ತು ಸಿಗುತ್ತಿದೆ.ಈಗ ಅಡಿಕೆ ಮತ್ತು ಕಾಫಿ ಸಂಸ್ಕರಣಾ ಘಟಕಗಳ ಮೂಲಕ ಸಂಘವು ರೈತರಿಗೆ ಇನ್ನಷ್ಟು ಅನುಕೂಲ ತರುತ್ತಿದೆ. ಸಂಸ್ಕರಣಾ ಘಟಕಗಳು ಈ ಸಾಲಿನಿಂದಲೇ ಕಾರ್ಯಾರಂಭಿಸಬೇಕು ಎಂದರು.
ಸಹಕಾರ ಸಂಘದ ಅಧ್ಯಕ್ಷ ಮಂಜಪ್ಪಯ್ಯ ಮಾತನಾಡಿ, ನಮ್ಮ ಸಂಘವು ಕಚಗಾನೆಯಲ್ಲಿ ೧೭ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಕಾಫಿ ಮತ್ತು ಅಡಿಕೆ ಸಂಸ್ಕರಣಾ ಘಟಕ ಸ್ಥಾಪಿಸುತ್ತಿದೆ.ಕಟ್ಟಡದ ಕೆಲಸ ಮುಕ್ತಾಯವಾಗಿದ್ದು ಯಂತ್ರೋಪಕರಣಗಳ ಅಳವಡಿಕೆ ನಡೆಯುತ್ತಿದೆ. ಬೆಳೆಗಾರರಿಗೆ ಕಾಫಿ ಸಂಗ್ರಹಕ್ಕೆ ಗೋದಾಮಿನ ವ್ಯವಸ್ಥೆ ಕೂಡ ಮಾಡಲಾಗಿದೆ.ಅಡಿಕೆ ಮಾದರಿಯಲ್ಲಿ ಕಾಫಿಗೆ ಕೂಡ ಒಳ್ಳೆಯ ಸಂಸ್ಥೆ ಮೂಲಕ ಖರೀದಿ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆದಿದೆ ಎಂದರು.

ಕಳೆದ ಸಾಲಿನಲ್ಲಿ ಸಂಘವು ೪೬೦ ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು ೩೨ ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ.ಸಂಘದಲ್ಲಿ ಈಗ ೩೬೫೨ ಸದಸ್ಯರು ಇದ್ದು ೪೮.೭೨ ಕೋಟಿ ರೂಪಾಯಿ ಠೇವಣಿ ಇದೆ.ದುಡಿಯುವ ಬಂಡವಾಳ ೭೭.೮೯ ಕೋಟಿ ರೂಪಾಯಿ ಆಗಿದ್ದು ಜಿಲ್ಲಾ ಬ್ಯಾಂಕಿಗೆ ೮.೧೩ ಕೋಟಿ ಸಾಲ ಬಾಕಿ ಇರುತ್ತದೆ ಎಂದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಮಹಾಬಲ ಭಟ್ ಮಾತನಾಡಿ, ಸಂಘದಲ್ಲಿ ೧.೨೮ ಕೋಟಿ ಶೇರು ಬಂಡವಾಳ, ೧.೦೪ ಕೋಟಿ ಆಪದ್ಧನ, ೫.೧೭ ಕೋಟಿ ಇತರೆ ನಿಧಿಗಳು ಇವೆ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ೨೩.೭೯ ಕೋಟಿ ರೂಪಾಯಿ ಸಾಲ ಸದಸ್ಯರಿಂದ ಬಾಕಿ ಇದ್ದು ಶೇ.೪.೭೬ ಮಾತ್ರ ಸುಸ್ತಿ ಆಗಿದೆ ಎಂದರು.ಮುಖAಡರಾದ ಜ್ವಾಲನಯ್ಯ, ವೆಂಕಟಸುಬ್ಬಯ್ಯ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಟ ಅಂಕ ಗಳಿಸಿ ಸಂಘದ ಸದಸ್ಯರ ೨೫ ಮಕ್ಕಳಿಗೆ ತಲಾ ೩ ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಿಸಲಾಯಿತು.ಸಂಘದ ಉಪಾಧ್ಯಕ್ಷೆ ಆಶಾಲತಾ ಜೈನ್, ನಿರ್ದೇಶಕರಾದ ಅನಿಲ್ ಡಿಸೋಜ, ಸತೀಶ್ಚಂದ್ರ, ಅನಸೂಯ, ರವಿ ಕುಮಾರ್, ರಾಜೇಂದ್ರ, ಕೃಷ್ಣಪ್ಪ, ಕೆ.ಕೃಷ್ಣ, ಹೆಚ್.ಟಿ.ಕೃಷ್ಣ, ಶ್ರೀಪಾಲಯ್ಯ ಇದ್ದರು.
