ಕಳಸ:ಕಾಡುಕೋಣದ ದಾಳಿಯಿಂದ ಗಂಭೀರ ಗಾಯಗಳಾಗಿ ಚಕಿತ್ಸೆ ಪಡೆಯುತ್ತಿದ್ದ ಮುಜೆಕಾನಿನ ಮರಿಗೌಡ ಚಿಕಿತ್ಸೆಯ ನಂತರ ಮನೆಗೆ ಮರಳಿದ್ದಾರೆ.
ಕಾಡುಕೋಣದ ಕೋಡು ಚುಚ್ಚಿದ್ದರಿಂದ ಮರಿಗೌಡರ ಶ್ವಾಸಕೋಶಕ್ಕೆ ಮೂರು ರಂಧ್ರಗಳು ಆಗಿದ್ದು ಎದೆಯ ಮೂಳೆಗಳು ಕೂಡ ಮುರಿದಿದ್ದವು. ಮರಿಗೌಡ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಎದೆಯ ಭಾಗದಲ್ಲಿ ತುರ್ತು ಶಸ್ತç ಚಿಕಿತ್ಸೆ ನಂತರ ೮ ದಿನ ಶುಶ್ರೂಷೆ ಪಡೆದಿದ್ದರು.ತಮ್ಮ ಮನೋಬಲ ಮತ್ತು ಸದೃಢ ದೇಹದ ಕಾರಣಕ್ಕೆ ವೈದ್ಯರು ಎಣಿಸಿದ್ದಕ್ಕಿಂತ ಮೊದಲೇ ಮರಿಗೌಡ ಚೇತರಿಸಿಕೊಂಡರು.
ಶನಿವಾರ ಅವರನ್ನು ಮನೆಗೆ ಕರೆತರಲಾಗಿದ್ದು ಇನ್ನೂ ೨ ತಿಂಗಳು ವಿಶೇಷ ಆರೈಕೆ ಅಗತ್ಯ ಇದೆ. ಮರಿಗೌಡ ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಅವರ ಶುಶ್ರೂಷೆ ಮಾಡಿದ್ದ ಸುರೇಶ್ ಕರ್ನಾಳಿ, ಅನಿಲ್ ಮುಜೆಕಾನು, ಶ್ರೀನಿವಾಸ ಕರ್ನಾಳಿ ಕೂಡ ಆಸ್ಪತ್ರೆಯಿಂದ ಬಿಡುಗಡೆ ಪಡೆದಿದ್ದಾರೆ.

ಅರಣ್ಯ ಇಲಾಖೆ ಈಗಾಗಲೇ ಮರಿಗೌಡ ಅವರ ಶುಶ್ರೂಷೆಗೆಂದು ೧ ಲಕ್ಷ ರೂಪಾಯಿ ವಿಶೇಷ ನೆರವು ನೀಡಿದೆ. ‘ಆಸ್ಪತ್ರೆಯ ವೆಚ್ಚವನ್ನು ಇಲಾಖೆ ನಿಯಮಗಳಿಗೆ ಅನುಸಾರವಾಗಿ ಮರಿಗೌಡ ಅವರಿಗೆ ಪಾವತಿ ಮಾಡಲಾಗುತ್ತದೆ.ಎಲ್ಲ ಅಗತ್ಯ ದಾಖಲೆಗಳನ್ನು ಇಲಾಖೆಗೆ ಒದಗಿಸಲು ಈಗಾಗಲೇ ಮನವಿ ಮಾಡಿದ್ದೇವೆ.ಈ ಬಗ್ಗೆ ಅತ್ಯಂತ ಕಾಳಜಿಯಿಂದ ಇಲಾಖೆ ಕೆಲಸ ಮಾಡುತ್ತಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ ತಿಳಿಸಿದ್ದಾರೆ.
ಆಸ್ಪತ್ರೆಯ ಬಿಲ್ ಕಟ್ಟಲು ಹಣವಿಲ್ಲದೆ ಮರಿಗೌಡ ಕುಟುಂಬ ಕಂಗಾಲಾಗಿದ್ದರು. ಕಳಸ ಮತ್ತು ಇತರೆ ಊರುಗಳ ಸಹೃದಯರು ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವನ್ನು ದೇಣಿಗೆ ನೀಡಿದ್ದರು.ಇದರಿಂದ ಮರಿಗೌಡ ಅವರ ಆಸ್ಪತ್ರೆ ಬಿಲ್ ಪಾವತಿಸಲು ಸಾಧ್ಯವಾಗಿದೆ. ಈ ಬಗ್ಗೆ ಮರಿಗೌಡ ಕುಟುಂಬವು ಕಳಸದ ಎಲ್ಲ ದಾನಿಗಳು ಮತ್ತು ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದೆ.
ಕಾಡುಕೋಣ ದಾಳಿ: ಸಂವೇದನೆ ಇನ್ನೂ ಸತ್ತಿಲ್ಲ ಎಂದು ನೆನಪು ಮಾಡಿದ ಸಹೃದಯರ ನೆರವು
