ಕಳಸ:ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮೂಲಕ ಹಾದುಹೋಗಿರುವ ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ ದುರಸ್ತಿಗೆ ಅರಣ್ಯ ಇಲಾಖೆ ತಕರಾರು ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದರು.
ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಚೇತನ್ ಅವರನ್ನು ಕಾಂಗ್ರೆಸ್ ಮುಖಂಡರಾದ ಶ್ರೇಣಿಕ, ವೀರೇಂದ್ರ, ಸುಜಿತ್, ಶ್ರೀನಿವಾಸ್, ಜಯಂತ್ ಗೌಡ , ಶಾಸಕರ ಆಪ್ತ ಕಾರ್ಯದರ್ಶಿ ಸಂಶುದ್ದೀನ್ ಶನಿವಾರ ಭೇಟಿ ಮಾಡಿದರು.
ಈ ಹೆದ್ದಾರಿಯ ನಿರ್ವಹಣೆ ನಡೆಯುತ್ತಿದ್ದು ಅರಣ್ಯ ಇಲಾಖೆ ತಕರಾರು ಮಾಡುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಇದೆ.ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ನಿಯೋಗ ಅರಣ್ಯಾಧಿಕಾರಿಯನ್ನು ಕೋರಿತು.
ಆಗ ಮಾತನಾಡಿದ ವಲಯ ಅರಣ್ಯಾಧಿಕಾರಿ ಚೇತನ್, ಈಗಾಗಲೇ ಇರುವ ಹೆದ್ದಾರಿ, ಚರಂಡಿ ನಿರ್ವಹಣೆಗೆ ಇಲಾಖೆ ಯಾವ ತಕರಾರು ಮಾಡಿಲ್ಲ. ರಸ್ತೆ ಪಕ್ಕದ ಮರಗಳನ್ನು ಜೆಸಿಬಿ ಬಳಸಿ ಕಿತ್ತಿದ್ದಕ್ಕೆ ಆಕ್ಷೇಪ ಮಾಡಲಾಗಿದೆ ಎಂದರು.
ರಸ್ತೆ ಮೇಲಕ್ಕೆ ಇಳಿದಿರುವ ಮರದ ರೆಂಬೆಗಳನ್ನು ಮನುಷ್ಯರೇ ಕತ್ತರಿಸಿ ನಿವಾರಣೆ ಮಾಡಬೇಕು. ತಿರುವುಗಳಲ್ಲಿ ರಸ್ತೆ ಸ್ಪಷ್ಟವಾಗಿ ಕಾಣುವಂತೆ ಕೆಲಸ ಮಾಡಲು ಕೂಡ ಆಕ್ಷೇಪ ಇಲ್ಲ ಎಂದರು.

ಕಾಂಗ್ರೆಸ್ ಮುಖಂಡ ಶ್ರೇಣಕ ಮಾತನಾಡಿ, ಕೆಂಗನಕೊಂಡದಿಂದ ನೆಲ್ಲಿಬೀಡು ಗ್ರಾಮದ ವರೆಗೆ 5 ಕೋಟಿ ವೆಚ್ಚದಲ್ಲಿ 2 ಕಿ.ಮೀ. ರಸ್ತೆ ಕಾರ್ಯ ಆರಂಭವಾಗಲಿದೆ.ನೆಲ್ಲಿಬೀಡಿನಿಂದ ಕುದುರೆಮುಖದವರೆಗೆ ಕಳೆದ ವರ್ಷ ಉಳಿದಿರುವ ಕಾಮಗಾರಿ ಸದ್ಯವೇ ಆರಂಭವಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ವೀರೇಂದ್ರ ಮಾತನಾಡಿ, ಕುದುರೆಮುಖದಿಂದ ಕಡಾಂಬಿ ಜಲಪಾತದವರೆಗಿನ 8 ಕಿ.ಮೀ ರಸ್ತೆ ಮರುಡಾಂಬರೀಕರಣಕ್ಕೆ 6 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. ಅಲ್ಲಿಂದ ಎಸ್.ಕೆ.ಬಾರ್ಡರ್ವರೆಗಿನ 12 ಕಿ.ಮೀ ರಸ್ತೆ ನಿರ್ವಹಣೆ ಮಾಡಲಾಗುತ್ತದೆ.ಮುಂದಿನ ಹಂತದಲ್ಲಿ ಇಲ್ಲೂ ಡಾಂಬರೀಕರಣ ನಡೆಯಲಿದೆ. ಈ ಎಲ್ಲ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಸಹಕಾರ ಅಗತ್ಯ ಎಂದರು.
