ಕಳಸ:ಹಳುವಳ್ಳಿ ಸುಬ್ರಮಣ್ಯೇಶ್ವರ ಸ್ವಾಮಿಯ ಷಷ್ಟಿ ರಥೋತ್ಸವ ಶನಿವಾರ ಸಡಗರ ಸಂಭ್ರಮದಿಂದ ನೆರವೇರಿತು.
ನಿನ್ನೆ ಗಣಪತಿ ಹೋಮ, ದಿಂಡಿ ಉತ್ಸವದ ಮೂಲಕ ರಥೋತ್ಸವದ ಪೂರ್ವಭಾವಿ ವಿಧಿಗಳು ಆರಂಭಗೊಂಡಿದ್ದವು.ಕಳಸ ತಾಲ್ಲೂಕಿನ ವರ್ಷದ ಮೊದಲ ರಥೋತ್ಸವಕ್ಕೆ ಕ್ಷಣಗಣನೆ ಶುರು ಆಗಿತ್ತು. ಶನಿವಾರ ಬೆಳಿಗ್ಗೆಯಿಂದಲೇ ದೇಗುಲದ ಸುತ್ತಲೂ ಭಕ್ತರ ದಂಡು ನೆರೆದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ಕೂಡ ಹೂಗಳಿಂದ ಸಿಂಗರಿಸಲಾಗಿತ್ತು.

ವಿವಿಧ ಬಗೆಯ ಹರಕೆಗಳನ್ನು ಹೇಳಿಕೊಳ್ಳುವವರು ದೇವಸ್ಥಾನದಲ್ಲಿ ಲಗುಬಗನೆ ಹೆಜ್ಜೆ ಹಾಕಿದರು.ಹಿಂದಿನ ವರ್ಷಗಳ ಕೋರಿಕೆಗಳು ತೀರಿದ ಹಿನ್ನೆಲೆಯಲ್ಲಿ ಹರಕೆ ವಸ್ತು ಒಪ್ಪಿಸಲು ರಾಜ್ಯದ ವಿವಿಧೆಡೆಯಿಂದ ಭಕ್ತರು ಬಂದಿದ್ದರು. ಹರಕೆ ವಸ್ತು ಮಾರಾಟ ಮಾಡುವವರಿಗೆ ಭರ್ಜರಿ ವ್ಯಾಪಾರಿ ಕಂಡು ಬಂತು.
ದೇವಸ್ಥಾನದಲ್ಲಿ ಹಣ್ಣು ಕಾಯಿ, ಪಂಚಕಜ್ಜಾಯ ಸಮರ್ಪಣೆ, ಸಹಸ್ರನಾಮಾರ್ಚನೆ, ಅನ್ನಸಂತರ್ಪಣೆ ನೆರವೇರಿತು. ಮಂಗಳವಾದ್ಯದ ಹಿಮ್ಮೇಳದ ಜೊತೆಗೆ ದೇವರ ಉತ್ಸವ ಮೂರ್ತಿಗಳನ್ನು ದೇಗುಲದ ಸುತ್ತಲೂ ಪ್ರದಕ್ಷಿಣೆಯಲ್ಲಿ ಕರೆದೊಯ್ಯಲಾಯಿತು.
ಆನಂತರ ಮಹಾಗಣಪತಿ ಮತ್ತು ಸುಬ್ರಮಣ್ಯ ಸ್ವಾಮಿಯ ಉತ್ಸವ ಮೂರ್ತಿಗಳ ರಥಾರೋಹಣ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ಹರ್ಷೋದ್ಘಾರ ಮಾಡಿದರು.ಆನಂತರ ರಥವನ್ನು ಗ್ರಾಮದ ರಥಬೀದಿಯಲ್ಲಿ ಉತ್ಸಾಹದಿಂದ ಎಳೆಯಲಾಯಿತು. ಅಯ್ಯಪ್ಪ ಸ್ವಾಮಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದರು.
