ಕಳಸ:ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ಭವಿಷ್ಯದ ಬಗ್ಗೆ ನಯನಾ ಮೋಟಮ್ಮ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಸಮಾಜದ ಸ್ವಾಸ್ಥ್ಯ ಹಾಳು ಮಾಡಿರುವ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗಾಗಿ ಎಸ್ ಐಟಿ ನೇಮಕ ಮಾಡಿದ್ದರೂ ಇನ್ನೂ ಹಲವಾರು ಅಂಶಗಳ ಬಗ್ಗೆ ಗಮನ ವಹಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ನಯನಾ ಮೋಟಮ್ಮ ಗಮನ ಸೆಳೆದಿದ್ದಾರೆ.
ತನಿಖೆಗಾಗಿ 4 ಮಹಿಳಾ ಪೊಲೀಸ್ ಅಧಿಕಾರಿಗಳ ವಿಶೇಷ ಮಹಿಳಾ ತಂಡ ರಚಿಸಬೇಕು.ಮಹಿಳಾ ಅಧಿಕಾರಿಗಳ ಜೊತೆ ಸಂತ್ರಸ್ತರು ಚರ್ಚೆ ನಡೆಸಲು ಗೌಪ್ಯ ಸ್ಥಳ ನಿಗದಿಪಡಿಸಬೇಕು.ಸಂತ್ರಸ್ತ ಮಹಿಳೆಯರು ತಮ್ಮ ಅಳಲು ಮತ್ತು ಸತ್ಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂತ್ರಸ್ತೆಯರ ಸಮಸ್ಯೆ ಆಲಿಸಿದ ನಂತರ ಅವರಿಗೆ ಹೇಗೆ ಭದ್ರತೆ ನೀಡಬಹುದು, ಅವರಲ್ಲಿ ಮಾನಸಿಕ ಸ್ಥೈರ್ಯ ಹೇಗೆ ತುಂಬಬಹುದು ಎಂಬುದನ್ನೂ ಪರಾಮರ್ಶಿಸಬೇಕು.ದೌರ್ಜನ್ಯಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ನೀಡಬೇಕು.ಸಂತ್ರಸ್ತರ ಮನೋಬಲ ಕುಗ್ಗದಂತೆ ಎಚ್ಚರವಹಿಸಲು ಒಬ್ಬ ಮನೋವೈದ್ಯರನ್ನು ಕೂಡ ನೇಮಿಸಬೇಕು ಎಂದೂ ನಯನಾ ಮೋಟಮ್ಮ ಒತ್ತಾಯಿಸಿದ್ದಾರೆ.
ಮಹಿಳಾ ಆಯೋಗದ ಅಧಿಕಾರಿ ಅಥವಾ ಸೂಕ್ತ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸಂತ್ರಸ್ತ ಮಹಿಳೆಯರನ್ನು ಮಹಿಳಾ ವಿಶೇಷ ತನಿಖಾ ತಂಡದ ಬಳಿಗೆ ಕರೆದೊಯ್ದು ಆಗಿರುವ ಅನ್ಯಾಯದ ಬಗ್ಗೆ ಸಮರ್ಪಕ ಮಾಹಿತಿ ದಾಖಲಿಸಬೇಕು. ಸಂತ್ರಸ್ತ ಮಹಿಳೆಯರಲ್ಲಿ ಭರವಸೆ ಮೂಡಿಸಿ, ಭದ್ರತೆ ನೀಡಿ ಮತ್ತೆ ಗೌರವಾನ್ವಿತ ಬದುಕು ಕಲ್ಪಿಸಿಕೊಡುವುದರ ಬಗ್ಗೆ ಗಂಭೀರ ಪ್ರಯತ್ನ ಆಗಬೇಕು ಎಂದೂ ಶಾಸಕಿ ನಯನಾ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
