ರವಿ ಕೆಳಂಗಡಿ
ಕಳಸ: ‘ನಾನು ನಿನ್ನೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಮಾತನಾಡಿಸಿದಾಗ ಮರಿಯ ನಗುತ್ತಾ ಮಾತನಾಡಿದರು.ಅಷ್ಟು ನೋವಿನ ನಡುವೆಯೂ ನಗುವ ಅವರು ಭಾರಿ ಗಟ್ಟಿ ಮನುಷ್ಯ’ ಎಂದು ಬಾಬ್ಸಾಲ್ ಎಸ್ಟೇಟ್ ಮಾಲೀಕರಾದ ಆರ್.ಜೆ.ಸಾಲ್ಡಾನ ಇಂದು ಬೆಳಿಗ್ಗೆ ನನಗೆ ಕರೆ ಮಾಡಿ ತಿಳಿಸಿದರು.
ಮಂಗಳೂರಿನ ಆ ಆಸ್ಪತ್ರೆಯ ವಿವಿಧ ಮಹಡಿಗಳಲ್ಲಿ ಮರಿಯ ಅವರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡಿದ್ದ ಆರ್.ಜೆ.ಸಾಲ್ಡಾನಾ ಜೊತೆ ಮರಿಯ ಧೈರ್ಯದಿಂದ ಮಾತಾಡಿದ್ದರು. ಸರಳತೆಯ ಮೂರ್ತಿಯೇ ಆದ ಸಾಲ್ಡಾನಾ, ಮರಿಯ ಅವರ ಕೈಗೆ ೫೦೦೦ ರೂಪಾಯಿ ಕೊಟ್ಟು ಬಂದರು.
- ಮರಿಯ ಕುಟುಂಬಕ್ಕೆ ಬಂದ ಸಂಕಟ ಅರಿತ ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಮರಿಯ ಅವರ ಪತ್ನಿಯನ್ನು ದೇವಸ್ಥಾನಕ್ಕೆ ಕರೆಸಿಕೊಂಡು 20 ಸಾವಿರ ನೆರವು ಕೊಟ್ಟರು.
ಇಂತಹ ಹೃದಯವಂತರು ಇರುವುದರಿಂದಲೇ ಕಳಸಕ್ಕೆ ಆಗಾಗ್ಗೆ ಒದಗುವ ಎಲ್ಲ ಅನಿಷ್ಟಗಳೂ, ಸಂಕಟಗಳೂ ಮರೆ ಆಗುತ್ತವೆ ಎಂದು ನನಗೆ ಅನಿಸಿತು.

ಕಳೆದ ಶನಿವಾರ ಕಾಡುಕೋಣದ ದಾಳಿಯಿಂದ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಪ್ರಾಣಭೀತಿಯಲ್ಲಿ ಮಲಗಿದ್ದ ಮರಿಯ ಇಂದು ಗುಣಮುಖರಾಗುವ ಭರವಸೆಯಲ್ಲಿದ್ದಾರೆ. ಶ್ವಾಸಕೋಶಕ್ಕೆ ಮೂರು ರಂಧ್ರಗಳು ಆಗುವಂತೆ ಮತ್ತು ಹೃದಯವೇ ಹೊರಗಿನಿಂದ ಕಾಣುವಂತೆ ಎತ್ತಿ ಎಸೆದಿದ್ದ ವನ್ಯ ಮೃಗದ ವಿರುದ್ಧ ಕಳಸದ ಹೃದಯವಂತ ಮನಸುಗಳು ಗೆದ್ದಿವೆ.
ಈ ಬಡ ಕೃಷಿಕನ ಆಸ್ಪತ್ರೆ ಖರ್ಚಿಗೆ ದೇಣಿಗೆ ನೀಡುವಂತೆ ‘ voice of kalasa ‘ ಮಾಡಿದ್ದ ಮನವಿಗೆ ಕಳಸ ತಾಲ್ಲೂಕಿನ ಜೊತೆಗೆ ದೂರದ ಊರುಗಳ ಓದುಗರು ಕೂಡ ಸ್ಪಂದಿಸಿ ಸುಮಾರು ೧ ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.ತಮ್ಮ ಶಕ್ತಿ ಅನುಸಾರ ೧೦ ರೂಪಾಯಿಯಿಂದ ಹಿಡಿದು ೨೦ ಸಾವಿರದವರೆಗೂ ನೆರವು ನೀಡಿದ ಎಲ್ಲರಿಗೂ ಮರಿಯ ಕುಟುಂಬದ ಪರವಾಗಿ ಅನಂತ ವಂದನೆಗಳು. ಜಡ್ಡು ಗಟ್ಟಿದ ಸಮಾಜದಲ್ಲಿ ಸಂವೇದನೆ ಇನ್ನೂ ಸಂಪೂರ್ಣವಾಗಿ ಸತ್ತಿಲ್ಲ ಎಂದು ನಾವು ನಂಬಬಹುದಾಗಿದೆ.
ಕಾಡುಕೋಣದ ದಾಳಿಯಿಂದ ಮರಿಯ ಕುಟುಂಬಕ್ಕೆ ಬಂದೆರಗಿದ ಸಂಕಷ್ಟದ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರ ಗಮನ ಸೆಳೆದ ತಕ್ಷಣ ಅವರು ಕೂಡ ಸಂಬAಧಪಟ್ಟ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದರು.ಆಸ್ಪತ್ರೆ ಬಿಲ್ ಪಾವತಿ ಮಾಡಲು ಶಕ್ತರಲ್ಲದ ಮರಿಯ ಅವರಿಗೆ ಮುಂಗಡವಾಗಿ ಆಸ್ಪತ್ರೆ ವೆಚ್ಚ ಭರಿಸಲು ಧನ ಸಹಾಯ ನೀಡುವಂತೆ ಅರಣ್ಯ ಇಲಾಖೆಯ ಮೇಲೆ ನಯನಾ ಮೋಟಮ್ಮ ಒತ್ತಡ ಹೇರಿದರು.

ಕಾಡುಕೋಣದ ದಾಳಿಯಿಂದ ಆದ ಅನಾಹುತದ ಹೊಣೆ ಹೊತ್ತ ಅರಣ್ಯ ಇಲಾಖೆ ಕೂಡ ಮರಿಯ ಕುಟುಂಬಕ್ಕೆ ನೆರವು ನೀಡುವ ಎಲ್ಲ ಪ್ರಯತ್ನ ನಡೆಸಿತು.ಕಳಸ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ವಲಯ ಅರಣ್ಯಾಧಿಕಾರಿ ನಿಶ್ಚಿತ್, ಎಸಿಎಫ್ ಚೇತನ್ ಗಸ್ತಿ, ಕೊಪ್ಪ ಡಿಎಫ್ಓ ನಂದೀಶ್ ಸತತ ಪ್ರಯತ್ನ ನಡೆಸಿ ಉನ್ನತ ಅಧಿಕಾರಿಗಳ ಮನವೊಲಿಸಿ ೧ ಲಕ್ಷ ರೂಪಾಯಿ ನೆರವು ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಅರಣ್ಯ ಇಲಾಖೆ ಬುಧವಾರ ಮರಿಯ ಪತ್ನಿ ರತ್ನ ಅವರಿಗೆ ೧ ಲಕ್ಷ ರೂಪಾಯಿ ಚೆಕ್ ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸಿಎಫ್ ಚೇತನ್ ಗಸ್ತಿ, ಹುಲಿ ಯೋಜನೆಯ ನಿಧಿಯಿಂದ ಈ ಮೊತ್ತವನ್ನು ಮರಿಯ ಅವರ ತುರ್ತು ಚಿಕಿತ್ಸಾ ವೆಚ್ಚಕ್ಕೆಂದು ನೀಡಲಾಗಿದೆ.ಮರಿಯ ಅವರು ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ ಅವರ ಆಸ್ಪತ್ರೆ ವೆಚ್ಚವನ್ನು ಕೂಡ ಇಲಾಖಾ ನಿಯಮಗಳ ಅನುಸಾರ ಭರಿಸಲಾಗುತ್ತದೆ ಎಂದರು.
