ಕಳಸ:ಕಳಸ ತಾಲ್ಲೂಕಿನ ಸಮಸಗ್ರ ಅಭಿವೃದ್ಧಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಭಾರತ ಕªಮ್ಯುನಿಸ್ಟ್ ಪಕ್ಷವು ಈ ತಿಂಗಳ ಅಂತ್ಯಕ್ಕೆ ಜನಾಗ್ರಹ ಚಳವಳಿ ನಡೆಸಲಿದೆ.
ಕಳಸ ತಾಲ್ಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿಲ್ಲ.ಜನರ ಮೂಲಭೂತ ಸಮಸ್ಯೆಗಳು ಬಗೆಹರಿಯದೆ ಜನಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ರಸ್ತೆ, ಸೇತುವೆಯಂತಹ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಮುಂದಾಗದೆ ಇರುವುದರಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಿಪಿಐ ಕಳಸ ತಾಲ್ಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ದೂರಿದ್ದಾರೆ.
ಕಳಸ ತಾಲ್ಲೂಕಿನ ವಿವಿಧ ಪಂಚಾಯಿತಿಯಲ್ಲಿ ೨ ಸಾವಿರಕ್ಕೂ ಹೆಚ್ಚು ನಿವೇಶನರಹಿತ ಕುಟುಂಬಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಯಾವುದೇ ಕೆಲಸ ಆಗಿಲ್ಲ.ಸಾವಿರಾರು ಎಕರೆ ಕಂದಾಯ ಭೂಮಿ ಒತ್ತುವರಿ ಆಗಿದ್ದರೂ ಬಡವರಿಗೆ ನಿವೇಶನ ಒದಗಿಸಲು ಭೂಮಿ ಇಲ್ಲವಾಗಿದೆ.ಕುಂಬಳಡಿಕೆ, ಚನ್ನಡಲು, ಕುದುರೆಮುಖ ನಿರಾಶ್ರಿತರ ಸಮಸ್ಯೆ ಜ್ವಲಂತವಾಗಿದೆ ಎಂದು ಗೋಪಾಲ ಶೆಟ್ಟಿ ಗಮನ ಸೆಳೆದಿದ್ದಾರೆ.
ಕಳಸ ಆಸ್ಪತ್ರೆಯಲ್ಲಿ ವೈದ್ಯ ಮತ್ತು ಸಿಬ್ಬಂದಿ ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿ ಇದೆ.ಇದನ್ನು ತುಂಬಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.ತಾಲ್ಲೂಕಿನ ಬಡಜನರಿಗೆ ಆರೋಗ್ಯ ಸೇವೆ ಒದಗಿಸಲು ಈ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಇದೇ ಬೇಡಿಕೆ ಇರಿಸಿಕೊಂಡು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇದೇ ೨೫ರಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕಿ ಆನಂತರ ಧರಣಿ ನಡೆಸಲಾಗುತ್ತದೆ ಎಂದು ಸಿಪಿಐ ತಾಲ್ಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ತಿಳಿಸಿದ್ದಾರೆ.
ಕಳಸದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳೇ ಇಲ್ಲ.ತೋಟಗಾರಿಕೆ, ಕಂದಾಯ, ಪಶು ಸಂಗೋಪನೆ, ಆರೋಗ್ಯ ಇಲಾಖೆಗಳಲ್ಲಿ ಅನೇಕ ಖಾಲಿ ಹುದ್ದೆ ಇವೆ.ಇದರಿಂದ ಜನರಿಗೆ ಅತ್ಯಂತ ಅನಾನುಕೂಲ ಉಂಟಾಗಿದೆ.ನೂತನ ಶಾಸಕಿ ನಯನಾ ಮೋಟಮ್ಮ ಕೂಡ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ವಿಫಲರಾಗಿದ್ದಾರೆ ಎಂದು ಗೋಪಾಲ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಿಪಿಐ ಮುಖಂಡರಾದ ಲಕ್ಷö್ಮಣಾಚಾರ್, ಕೆಳಗೂರು ರಮೇಶ್ ಇದ್ದರು.
