ರವಿ ಕೆಳಂಗಡಿ
ಕಳಸ:೩೫ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಕಳಸ ತಾಲ್ಲೂಕಿನ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ಆಗಬೇಕಿದ್ದ ಸಮುದಾಯ ಆರೋಗ್ಯ ಕೇಂದ್ರವೇ ಸಮಸ್ಯೆಗಳ ಆಗರ ಆಗಿರುವುದು ದುರ್ದೈವ.
೪ ವೈದ್ಯರು ಸೇರಿದಂತೆ ೪೦ ಸಿಬ್ಬಂದಿ ಇರಬೇಕಾದ ಆಸ್ಪತ್ರೆಯಲ್ಲಿ ಈಗ ಯಾವುದೇ ವೈದ್ಯರು ಇಲ್ಲ. ಒಟ್ಟು ಇರುವ ೮ ಸಿಬ್ಬಂದಿಯಲ್ಲಿ ಕೆಲವರು ಮಾತ್ರ ಆಸ್ಪತ್ರೆಯ ಹೆಸರನ್ನು ಜೀವಂತ ಇಡುವಲ್ಲಿ ಹೆಣಗಾಟ ನಡೆಸುತ್ತಿದ್ದಾರೆ.
ಆಸ್ಪತ್ರೆಯ ಪ್ರಯೋಗಾಲಯದಲ್ಲಿ ರಿಯೇಜೆಂಟ್ ಇಲ್ಲ.ಪುರಾತನ ಎಕ್ಸ್ರೇ ಯಂತ್ರದ ಬಗ್ಗೆ ಜನರಿಗೆ ವಿಶ್ವಾಸ ಇಲ್ಲ. ಆಸ್ಪತ್ರೆಗೆ ಬರುವ ರೋಗಿಗಳನ್ನು ಸಮಾಧಾನ ಪಡಿಸಲೆಂದು ಆರೋಗ್ಯ ಸಿಬ್ಬಂದಿಯೇ ವೈದ್ಯರ ಖರ್ಚಿಯಲ್ಲಿ ಕುಳಿತು ಔಷಧಿ ಕೊಡುವ ನಗೆಪಾಟಲಿನ ಸ್ಥಿತಿ ಇಲ್ಲಿದೆ.
ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇದ್ದರೂ ವಾಹನದ ಸಾಮರ್ಥ್ಯಕ್ಕೆ ತಕ್ಕ ಕೆಲಸ ಸಿಗುತ್ತಿಲ್ಲ. ೧೦೮ ಆಂಬುಲೆನ್ಸ್ ಟೈರ್ಗಳು ವರ್ಷದಲ್ಲಿ ಅರ್ಧ ಕಾಲ ಸವೆದು ಹೋಗಿ ಆ ಅವಧಿಯಲ್ಲಿ ಉಪಯೋಗಕ್ಕೆ ಬರದಂತೆ ಆಗುತ್ತವೆ.
ಆಸ್ಪತ್ರೆಯ ವೈದ್ಯರ ಮತ್ತು ದಾದಿಯರ ವಸತಿಗೃಹ ಭೂತ ಬಂಗಲೆಯ0ತಾಗಿವೆ.ಆಸ್ಪತ್ರೆಯಲ್ಲಿ ಸಾಕಷ್ಟು ಕೊಠಡಿಗಳು, scanning ಯಂತ್ರ , ಆಪರೇಷನ್ ಥಿಯೇಟರ್, ದಂತ ಚಿಕಿತ್ಸಾ ಕೇಂದ್ರ, ಫಿಜಿಯೋಥೆರಪಿ ಇದ್ದರೂ ಊಟಕ್ಕೆ ಇಲ್ಲದ ಉಪ್ಪಿನಕಾಯಿ ಆಗಿವೆ.
ಆಸ್ಪತ್ರೆಯಲ್ಲಿ ಇರುವ ಕೆಲ ಸಿಬ್ಬಂದಿ ಕೂಡ ರೋಗಿಗಳ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂಬ ದೂರು ಕೂಡ ವ್ಯಾಪಕವಾಗಿದೆ.ಸದ್ಯಕ್ಕೆ ಭಾರತಿಬೈಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಮಧುಸೂಧನ್ ಅವರಿಗೆ ಈ ಆಸ್ಪತ್ರೆಯ ಆಡಳಿತ ವಹಿಸಲಾಗಿದೆ.ಆಸ್ಪತ್ರೆಯನ್ನು ಸರಿದಾರಿಗೆ ತರಲು ಈ ವೈದ್ಯರು ಸತತ ಪ್ರಯತ್ನ ನಡೆಸುತ್ತಾ ಇದ್ದಾರೆ.ಆದರೆ ಕಳಸ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದಿರುವುದರಿಂದ ಆಸ್ಪತ್ರೆಯು ಅರ್ಚಕರೇ ಇಲ್ಲದ ದೇಗುಲದಂತೆ ಆಗಿದೆ.
ಈಗಿನ ಶಾಸಕಿ ನಯನಾ ಮೋಟಮ್ಮ ಆರೋಗ್ಯ ಸಚಿವರ ಜೊತೆ ಸತತ ಸಂಪರ್ಕ ಹೊಂದಿದ್ದು ೨ ತಿಂಗಳಲ್ಲಿ ಕಳಸ ಆಸ್ಪತ್ರೆಯ ಬಹುತೇಕ ಸಮಸ್ಯೆ ನಿವಾರಿಸುವ ಭರವಸೆ ನೀಡಿದ್ದಾರೆ.ಅಲ್ಲಿವರೆಗೂ ಕಳಸ ಆಸ್ಪತ್ರೆಗೆ ಮೂಡಿಗೆರೆಯ ವಿವಿಧ ಆಸ್ಪತ್ರೆಗಳಿಂದ ನಿಷ್ಟಾವಂತ ವೈದ್ಯರನ್ನು ವಾರಕ್ಕೆ ೨ ದಿನದಂತೆ ವಾರವಿಡೀ ನಿಯೋಜನೆ ಮಾಡುವುದು ಸದ್ಯದ ಪರಿಹಾರ ಆಗಿದೆ.

ಅಡಿಕೆ, ಕಾಫಿ ಹಂಗಾಮು ಆರಂಭವಾಗುವುದರಿ0ದ ಕಳಸ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಅಕ್ಟೋಬರ್ ತಿಂಗಳಿ0ದ ಫೆಬ್ರವರಿವರೆಗೂ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ವೈದ್ಯರ ಅಗತ್ಯ ತೀವ್ರವಾಗಿಯೇ ಇರುತ್ತದೆ.
ಕಳಸ ಆಸ್ಪತ್ರೆಗೆ ಮಾನವೀಯತೆ ಮತ್ತು ಸೇವಾ ಮನೋಭಾವದ ವೈದ್ಯರು ಬಂದರೆ ಖಂಡಿತವಾಗಿ ಜನರಿಗೆ ಬಹಳಷ್ಟು ಅನುಕೂಲ ಆಗಲಿದೆ.ಈಗಾಗಲೇ ಕಾರ್ಮಿಕರು ಮೈಕ್ರೋ ಫೈನಾನ್ಸ್ ಸುಳಿಗೆ ಸಿಲುಕಿ ಆರ್ಥಿಕವಾಗಿ ಬಹಳ ಪ್ರಯಾಸ ಪಡುತ್ತಿದ್ದಾರೆ.ಇದರ ಜೊತೆಗೆ ಆರೋಗ್ಯ ಸಮಸ್ಯೆಯ ಆರ್ಥಿಕ ಹೊಡೆತ ಕೂಡ ಸೇರಿದರೆ ಕಾರ್ಮಿಕರ ಬದುಕು ಮತ್ತಷ್ಟು ದುರ್ಭರ ಆಗುತ್ತದೆ.
ಮುಂದಿನ ದಿನಗಳಲ್ಲಿ ಕಳಸ ಆಸ್ಪತ್ರೆಯ ಎಲ್ಲ ಸಮಸ್ಯೆ ನೀಗಿ ಈ ಹಿಂದೆ ಡಾ.ರವಿ, ಡಾ.ಮಾನಸ ಮತ್ತು ಡಾ. ಸಂದೀಪ್ ಅವರಂತಹ ವೈದ್ಯರು ಇದ್ದಾಗ ತಲುಪಿದ್ದ ಉತ್ತುಂಗವನ್ನು ತಲುಪಲಿ ಎಂಬುದು ‘ವಾಯ್ಸ್ ಆಫ್ ಕಳಸ ‘ ಹಾರೈಕೆ.
ಈ ಹಾದಿಯಲ್ಲಿ ಎಲ್ಲರೂ ತಮ್ಮ ಸ್ವಪ್ರತಿಷ್ಟೆ ಮರೆತು ಕೆಲಸ ಮಾಡಬೇಕಿರುವುದು ಈ ಕಾಲದ ಅಗತ್ಯವೂ ಹೌದು.
