ರವಿ ಕೆಳಂಗಡಿ
ಜಿಲ್ಲೆಯಲ್ಲಿ ಪರಿಸರ ಕಾಳಜಿ ಬಿತ್ತುವ ಕೆಲಸ ಮಾಡುತ್ತಿರುವ ಬೀಸ್ ಸಂಸ್ಥೆ ಕಳೆದ ೩ ತಿಂಗಳಲ್ಲಿ ಒಟ್ಟು ೧೦೦ ಕಾರ್ಯಕ್ರಮ ಮಾಡಿದ ಹೆಗ್ಗಳಿಕೆ ಸಾಧಿಸಿದೆ.
ಮಲೆನಾಡಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಈ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯ ಜೊತೆಗೆ ಹವಾಗುಣ ಬದಲಾವಣೆಯಿಂದ ಕೃಷಿಯಲ್ಲಿ ಆಗುತ್ತಿರುವ ಪಲ್ಲಟದ ಸಂಕೀರ್ಣ ಸಂಬAಧವನ್ನು ಸರಳವಾಗಿ ವಿವರಿಸುತ್ತಿದೆ.
ಶೃಂಗೇರಿ ತಾಲ್ಲೂಕಿನ ಜೋಗಿಬೈಲಿನಲ್ಲಿ ಕೆಲ ಕೃಷಿಕರು ಮತ್ತು ಯುವಜನರು ಒಗ್ಗೂಡಿ ರಚಿಸಿಕೊಂಡ ಜೀವ ವೈವಿಧ್ಯ, ಪರಿಸರ ಮತ್ತು ಕೃಷಿ ಅಧ್ಯಯನ ಕೇಂದ್ರ (ಬೀಸ್) ಕಳೆದ ೩ ತಿಂಗಳಲ್ಲಿ ನಡೆಸಿದ ಅವಿರತ ಚಟುವಟಿಕೆ ಈ ಕಾಲದ ಅಪರೂಪದ ಪರಿಸರ ಚಳವಳಿಯೇ ಸರಿ.

ಈ ಯುವಜನರ ತಂಡ ಸತತವಾಗಿ ಊರಿಂದ ಊರಿಗೆ ಹೋಗಿ ಪ್ರತಿದಿನವೂ ಶಾಲಾ ಕಾಲೇಜುಗಳಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಸುತ್ತಿದೆ.ಮನುಷ್ಯನ ಸ್ವಾರ್ಥದಿಂದಾಗಿ ಪರಿಸರದ ಮೇಲಾಗುತ್ತಿರುವ ಅನಾಹುತ ಮತ್ತು ಅದರಿಂದ ಹವಾಮಾನದಲ್ಲಿ ಆಗುತ್ತಿರುವ ಪ್ರತಿಕೂಲ ಬದಲಾವಣೆ ಬಗ್ಗೆ ಈ ತಂಡ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ.
ಕುವೆಂಪು ಹುಟ್ಟೂರಿನಿಂದ ಹೊರಟು ಈಗಾಗಲೇ ಈ ತಂಡ ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ, ಬೆಳ್ತಂಗಡಿ, ಕಾರ್ಕಳ, ಚಿಕ್ಕಮಗಳೂರು ತಾಲ್ಲೂಕಿನ ವಿವಿಧ ಶಾಲೆಗಲ್ಲಿ ಕಾರ್ಯಕ್ರಮ ನಡೆಸಿದೆ. ದಿನಕ್ಕೆ ೨ ವಿದ್ಯಾ ಸಂಸ್ಥೆಯಲ್ಲಿ ಈ ವಿಶಿಷ್ಟ ಪ್ರಯತ್ನ ನಡೆಸುವ ಬೀಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆ ನಡೆಸುತ್ತಿದೆ.
ಕಾಯಕ್ರಮದಲ್ಲಿ ಯಾವುದೇ ಅತಿಥಿ, ಭಾಷಣ, ಔಪಚಾರಿಕ ಸಭೆ ಇರುವುದಿಲ್ಲ. ಹವಾಮಾನ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರ್ಧ ಗಂಟೆ ಸಾಕ್ಷö್ಯಚಿತ್ರ ಪ್ರದರ್ಶನ ನಡೆಸಲಾಗುತ್ತದೆ.ನಾಗರಾಜ್ ಕೂವೆ ಪ್ರಮುಖವಾಗಿ ಬಹುತೇಕ ಉಪನ್ಯಾಸ ನಡೆಸುತ್ತಿದ್ದು ಅವರಿಗೆ ಗುರುಮೂರ್ತಿ ಜೋಗಿಬೈಲು, ಮನು ಜೋಗಿಬೈಲು, ಅನಿಲ್ ಮುಜೆಕಾನು, ಪ್ರವೀಣ್ ಹಳುವಳ್ಳಿ, ಪಲ್ಲವಿ, ಅತೀಶ್, ಮಣಿಶೇಖರ್, ರಾಧಿಕಾ ನೆರವು ನೀಡುತ್ತಿದ್ದಾರೆ.
ಕುವೆಂಪು ಬಾಲ್ಯ ಕಳೆದ ಕೊಪ್ಪ ತಾಲ್ಲೂಕಿನಿಂದ ಆರಂಭವಾದ ಈ ಅಭಿಯಾನ ತೇಜಸ್ವಿ ತಮ್ಮ ಕೊನೆ ದಿನಗಳನ್ನು ಕಳೆದ ಮೂಡಿಗೆರೆಯಲ್ಲಿ ಮುಕ್ತಾಯವಾಗಲಿದೆ.ಇದೇ ೨೨ರಂದು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಸಮಾರೋಪ ನಡೆಯಲಿದೆ.
ಪರಿಸರದ ಬಗ್ಗೆ ಉಸಿರು ಉಸಿರಲ್ಲೂ ಕಾಳಜಿ ಹೊಂದಿರುವ ಬೀಸ್ ಸಂಸ್ಥೆಯ ಸದಸ್ಯರಿಗೆ ನಾವು ಮನಪೂರ್ವಕವಾಗಿ ವಂದನೆ ಹೇಳಬೇಕಿದೆ.
