ಕಳಸ:ಹೃದಯಾಘಾತದಿAದ ಇಂದು ಬೆಳಿಗ್ಗೆ ಪ್ರಾಣ ಕಳೆದುಕೊಂಡ ಇಲ್ಲಿನ ಪೊಲೀಸ್ ಠಾಣೆಯ ಎಎಸ್ಐ ಜಿ.ಕೆ.ಮುರುಳೀಧರ್ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ನಡೆದಿದೆ.

ಶನಿವಾರ ಸಂಜೆವರೆಗೂ ಮುರುಳೀಧರ್ ಕಳಸ ಠಾಣೆಯಲ್ಲಿ ಸ್ಟೇಶನ್ ಹೌಸ್ ಆಫೀಸರ್ ಕರ್ತವ್ಯ ನಿರ್ವಹಿಸಿದ್ದರು. ಮನೆಯಲ್ಲಿ ಮಲಗಿದ್ದಾಗ ಭಾನುವಾರ ಬೆಳಗಿನ ಜಾವ ೪.೪೫ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.ಕಳಸ ಕಾವೇರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದಾಗ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ ಆಗಿರುವುದು ತಿಳಿದುಬಂದಿದೆ.ಬೆಳಿಗ್ಗೆ ೫.೩೦ರ ವೇಳೆಗೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮುರುಳೀಧರ ಅವರು ಪತ್ನಿ, ಒಬ್ಬ ಪುತ್ರಿ, ಅಳಿಯ ಹಾಗೂ ಮೊಮ್ಮಗುವನ್ನು ಅಗಲಿದ್ದಾರೆ.ಬೀರೂರು ಮೂಲದ ಮುರುಳೀಧರ ಅವರ ಶವವನ್ನು ಕಳಸ ಠಾಣೆ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಂ ಅಮಟೆ ಮುರುಳೀಧರ್ ಅವರಿಗೆ ಅಂತಿಮ ನಮನ ಹಾಗೂ ಸರ್ಕಾರಿ ಗೌರವ ಸಲ್ಲಿಸಿದರು.

ಅನೇಕ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಅಶ್ರುಧಾರೆ ಸುರಿಸಿದರು.ಆನಂತರ ಸರ್ಕಾರಿ ಗೌರವದೊಂದಿಗೆ ಕಳಸೇಶ್ವರ ನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
