ಕಳಸ:ಕಳೆದ 3 ದಿನಗಳಿಂದ ತಾಲ್ಲೂಕಿನಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಕಡಿತಗೊಂಡ ಹಿನ್ನೆಲೆಯಲ್ಲಿ ಗ್ರಾಹಕರು ಸೋಮವಾರ ಬಿಎಸ್ಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಿದರು.
ಕಳಸ, ಹೊರನಾಡು, ಸಂಸೆ, ಹಿರೇಬೈಲು, ಬಾಳೆಹೊಳೆ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ ಇರುವುದರಿಂದ ಗ್ರಾಹಕರಿಗೆ ಅಪಾರ ಸಂಕಷ್ಟ ಎದುರಾಗಿದೆ.ಈ ಬಗ್ಗೆ ಬಿಎಸ್ಎನ್ಎಲ್ ಸಂಸ್ಥೆ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
ಚಿತ್ರ ನಿರ್ಮಾಪಕ ರವಿ ರೈ ಮಾತನಾಡಿ, ಒಂದು ಕೇಬಲ್ ದುರಸ್ತಿಗೆ 3 ದಿನ ಬೇಕು ಎಂದಾದರೆ ಈ ಸಂಸ್ಥೆಯ ಕಾರ್ಯಕ್ಷಮತೆ ಬಗ್ಗೆ ಪ್ರಶ್ನಿಸಲೇಬೇಕು.ಗ್ರಾಮೀಣ ಪ್ರದೇಶದ ಜನರು ನೆಟವರ್ಕ್ ಇಲ್ಲದೆ ತೀವ್ರ ಅನಾನುಕೂಲ ಅನುಭವಿಸಿದ್ದಾರೆ.ಆದರೆ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದರು.
ಸಂಸೆ ಪಂಚಾಯಿತಿ ಮಾಜಿ ಸದಸ್ಯ ಕೆ.ಜೆ.ಧರಣೇಂದ್ರ ಮಾತನಾಡಿ, ಸಂಸೆಯಲ್ಲಿ 3 ವರ್ಷದಿಂದಲೂ ವಿದ್ಯುತ್ ಇಲ್ಲದಿದ್ದರೆ ಬಿಎಸ್ಎನ್ಎಲ್ ಸೇವೆ ಸ್ಥಗಿತ ಆಗುತ್ತದೆ.ಬ್ಯಾಟರಿ ಅಥವಾ ಜನರೇಟರ್ ವ್ಯವಸ್ಥೆ ಮಾಡದೆ ಗ್ರಾಹಕರಿಗೆ ಸರಿಯಾದ ಸೇವೆ ನೀಡಲು ಆಗದಿದ್ದರೆ ನಿಮ್ಮ ಮೊಬೈಲ್ ಟವರ್ ಕಿತ್ತುಕೊಂಡು ಹೋಗಿ ಎಂದು ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಜರಿದರು.
ಸ್ಥಳಕ್ಕೆ ಬಂದ ಕಿರಿಯ ಎಂಜಿನಿಯರ್ ಕನ್ನಡ ಅರಿಯದ ಕಾರಣ ಅವರ ಜೊತೆ ಪ್ರತಿಭಟನಾಕಾರರು ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗಲಿಲ್ಲ.ಕಿರಿಯ ಎಂಜಿನಿಯರ್ ಮಾತನಾಡಿ ‘ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಟ್ಟಡ ಕಾಮಗಾರಿ ವೇಳೆಗೆ ಕೇಬಲ್ ತುಂಡಾಗಿದೆ.ಇದನ್ನು ಸರಿಪಡಿಸಲು ಬಹಳ ಶ್ರಮ ಪಡುತ್ತಿದ್ದೇವೆ.ಮಳೆ ಕಾರಣ ವಿಳಂಬ ಆಗಿದೆ ಎಂದು ಸಮಜಾಯಿಷಿ ನೀಡಿದರು.
ವರ್ಷವಿಡೀ ನಿಮ್ಮ ಸೇವೆ ವಿಳಂಬವೇ ಆಗಿದೆ.ಇದರಿಂದ ಸಂಸ್ಥೆ ಬಿಟ್ಟು ಅನೇಕ ಜನರು ಖಾಸಗಿ ಮೊಬೈಲ್ ಗ್ರಾಹಕರಾಗಿದ್ದಾರೆ ಎಂದು ಹೊರನಾಡಿನ ಜ್ವಾಲನ್ಯಯ ತಕರಾರು ಮಾಡಿದರು.ಸೋಮವಾರ ಸಂಜೆಯ ಒಳಗೆ ಎಲ್ಲ ಸಮಸ್ಯೆ ಸರಿಪಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ ನಂತರ ಪ್ರತಿಭಟನಾ ಕಾರರು ಮರಳಿದರು.
ಟಿಟೂ ಥಾಮಸ್, ಅವಿನಾಶ್, ಗೋಪಾಲ ಶೆಟ್ಟಿ,ಮಲ್ಲಿಕಾರ್ಜುನ್, ಸಂತೋಷ್ ಇದ್ದರು.
