ಕಳಸ:ಕಳಸದಿಂದ ಕುದುರೆಮುಖ-ಎಸ್.ಕೆ.ಬಾರ್ಡರ್ ಮೂಲಕ ಸಾಗಿ ಕಾರ್ಕಳ ಸಂಪರ್ಕಿಸುವ ರಾಜ್ಯ ಹೆದ್ದಾರಿ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಇದೇ 14ರ ಗುರುವಾರ ಕಳಸದಲ್ಲಿ ರಸ್ತೆ ತಡೆ ನಡೆಸಲಾಗುತ್ತದೆ.
ಹಿಂದೊಮ್ಮೆ ಜಿಲ್ಲೆಯಲ್ಲೇ ಮಾದರಿ ರಸ್ತೆಯಾಗಿದ್ದ ಈ ಹೆದ್ದಾರಿ ನಿರ್ವಹಣೆ ಕೊರತೆಯಿಂದ ನಲುಗುತ್ತಿದೆ. ಕಳೆದ ಏಳೆಂಟು ವರ್ಷದಿಂದ ಈ ರಸ್ತೆಗೆ ಮರುಡಾಂಬರೀಕರಣ ನಡೆಸದೆ ಇರುವುದರಿಂದ ಈ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿ ಇದೆ.
ರಸ್ತೆಯಲ್ಲಿ ದೊಡ್ಡರ ಗಾತ್ರದ ಗುಂಡಿಗಳು ಇದ್ದು ವಾಹನ ಸಂಚಾರಕ್ಕೆ ಅಯೋಗ್ಯವೇ ಆಗಿದೆ. ಕಳಸ ತಾಲ್ಲೂಕನ್ನು ಕರಾವಳಿ ಜೊತೆಗೆ ಈ ಹೆದ್ಧಾರಿ ಬೆಸೆಯುತ್ತದೆ. ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆ ಬಳಸಿ ಮಂಗಳೂರು, ಉಡುಪಿ, ಕಾರ್ಕಳ, ಮೂಡಬಿದರೆ, ಉಜಿರೆ ಕಡೆಗೆ ಸಾಗುತ್ತವೆ.ಆದರೆ ಈ ಹೆದ್ದಾರಿಗೆ ಒದಗಿರುವ ದುಸ್ಥಿತಿ ಕಂಡು ಜನರು ಹಿಡಿಶಾಪ ಹಾಕುತ್ತಿದ್ದಾರೆ.ಹೆದ್ದಾರಿ ದುರಸ್ತಿ ಮಾಡದೆ ಇರುವುದರಿಂದ ಈ ರಸ್ತೆ ಅತ್ಯಂತ ಹದಗೆಟ್ಟ ಸ್ಥಿತಿಯಲ್ಲಿ ಇದೆ.ಕಳೆದ ವರ್ಷ ಅಷ್ಟಿಷ್ಟು ಡಾಂಬರೀಕರಣ ಮಾಡಿದ ನಂತರ ಕಾಮಗಾರಿ ಸ್ಥಗಿತ ಮಾಡಲಾಗಿದೆ.
‘ರಸ್ತೆ ನಿರ್ವಹಣೆಗೆ ಲಕ್ಷಗಟ್ಟಲೆ ವೆಚ್ಚ ಮಾಡಿದರೂ ರಸ್ತೆ ಬದಿ ಚರಂಡಿ ತುಂಬಿಕೊಂಡಿದೆ.ಕಾಡು ಮರಗಳ ರೆಂಬೆಗಳು ಮತ್ತು ಪೊದೆಗಳು ರಸ್ತೆಯ ಬಹುಭಾಗ ಆವರಿಸಿಕೊಂಡಿದೆ. ಹೆದ್ದಾರಿ ಬಗ್ಗೆ ಲೋಕೋಪಯೋಗಿ ಇಲಾಖೆಯು ಅತ್ಯಂತ ನಿರ್ಲಕ್ಷ್ಯ ತೋರುತ್ತಿದೆ.ಆದ್ದರಿಂದ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಗುರುವಾರ ರಸ್ತೆ ತಡೆ ಮಾಡಲಾಗುತ್ತದೆ’ ಎಂದು ಹೋರಾಟಗಾರ, ಚಿತ್ರ ನಿರ್ಮಾಪಕ ರವಿ ರೈ ತಿಳಿಸಿದ್ದಾರೆ.
ರಸ್ತೆ ತಡೆಗೆ ಕಳಸ, ಸಂಸೆ, ಕುದುರೆಮುಖದ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಅವರು ತಿಳಿಸಿದ್ದಾರೆ.ಕಳಸ ತಾಲ್ಲೂಕಿನ ನೂರಾರು ಗ್ರಾಮಸ್ಥರು ಹಾಜರಿದ್ದು ಈ ರಸ್ತೆ ತಡೆಗೆ ಸಹಕಾರ ಕೊಡಬೇಕು ಎಂದು ಅವರು ಕೋರಿದ್ದಾರೆ.
