ಕಳಸ:ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಕ್ರವಾರದಿಂದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಸಾದ ಭೋಜನದ ಫಲ ಸಿಕ್ಕಿದೆ.
ಕಾಲೇಜಿನ ೨೫೦ ವಿದ್ಯಾರ್ಥಿಗಳ ಪೈಕಿ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಇಲ್ಲದೆ ಹಸಿದುಕೊಂಡೇ ಮನೆಗೆ ಮರಳುತ್ತಿದ್ದರು.ಆದ್ದರಿಂದ ಎಲ್ಲ ಮಕ್ಕಳಿಗೂ ಮಧ್ಯಾಹ್ನ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವತಿಯಿಂದ ಪ್ರಸಾದ ಭೋಜನಕ್ಕೆ ಬೇಡಿಕೆ ಸಲ್ಲಿಸಬೇಕು ಎಂಬ ಆಲೋಚನೆ ಹಲವಾರು ದಿನಗಳಿಂದ ಪೋಷಕರಲ್ಲಿ ಇತ್ತು.
೨ ತಿಂಗಳ ಹಿಂದೆ ಶಾಸಕಿ ನಯನಾ ಮೋಟಮ್ಮ ಹೊರನಾಡಿನ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈ ಬಗ್ಗೆ ಜಿ.ಭೀಮೇಶ್ವರ ಜೋಷಿ ಅವರ ಗಮನ ಸೆಳೆದಿದ್ದರು.ಆನಂತರ ಕಾಲೇಜು ಅಭಿವೃದ್ಧಿ ಸಮಿತಿಯ ರಫೀಕ್ ಮತ್ತು ಸಂಗಡಿಗರು ಹೊರನಾಡಿಗೆ ತೆರಳಿ ಜೋಷಿ ಅವರಲ್ಲಿ ಪ್ರಸಾದ ಭೋಜನಕ್ಕೆ ಮನವಿ ಮಾಡಿದ್ದರು.
ಇದಕ್ಕೆ ಸಮ್ಮತಿಸಿದ ಭೀಮೇಶ್ವರ ಜೋಷಿ, ಶುಕ್ರವಾರ ಪ್ರಸಾದ ಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿಯೇ ಬಿಟ್ಟರು.ಮಕ್ಕಳಿಗೆ ಊಟ ಬಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಭೀಮೇಶ್ವರ ಜೋಷಿ, ಹೊರನಾಡಿನ ಅನ್ನಪೂರ್ಣೆಯ ಪ್ರಸಾದವನ್ನು ವ್ಯರ್ಥ ಮಾಡದೆ ಸದ್ಭಳಕೆ ಮಾಡಿಕೊಳ್ಳಿ.ಎಲ್ಲರಿಗೂ ವಿದ್ಯೆಯ ಲಾಭ ದಕ್ಕಲಿ ಎಂದು ಹಾರೈಸಿದರು.
ಕಳಸ ಪದವಿಪೂರ್ವ ಕಾಲೇಜಿನ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ಪ್ರಸಾದ ಭೋಜನ ಮಾಡಲಿದ್ದಾರೆ.ಹೊರನಾಡಿನಿಂದ ಪ್ರತಿದಿನ ಮಧ್ಯಾಹ್ನ ಊಟದ ಸಮಯಕ್ಕೆ ಬಿಸಿಬಿಸಿ ಊಟ ಕಳಿಸುವ ವ್ಯವಸ್ಥೆಯನ್ನು ಅನ್ನಪೂರ್ಣೇಶ್ವರಿ ದೇವಸ್ಥಾನ ಮಾಡಲಿದೆ.

ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನಪೂರ್ಣೇಶ್ವರಿ ದೇವಸ್ಥಾನ ಈಗಾಗಲೇ ಪ್ರಸಾದ ಭೋಜನ ವಿತರಿಸುತ್ತಿದೆ.ಇದೀಗ ಸರ್ಕಾರಿ ಪದವಿಪೂರ್ವ ಕಾಲೇಜಿನ ರೂಪದಲ್ಲಿ ಒಟ್ಟು ಕಳಸದ ೩ ಶಿಕ್ಷಣ ಸಂಸ್ಥೆಗಳಿಗೆ ಹೊರನಾಡು ಪ್ರಸಾದ ಭಾಗ್ಯ ಕಲ್ಪಿಸಿದಂತಾಗಿದೆ.
ಅನ್ನಪೂರ್ಣೇಶ್ವರಿ ದೇವಸ್ಥಾನದ ಈ ವಿಶಿಷ್ಟ ಸೇವೆಯನ್ನು ಸ್ಥಳೀಯರು ಕೊಂಡಾಡಿದ್ದಾರೆ.ಕ್ಷೇತ್ರದ ಅನ್ನದಾಸೋಹದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕೂಡ ಸಂತಸ ತೋರಿದ್ದಾರೆ.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಫೀಕ್, ಉಪಾಧ್ಯಕ್ಷ ಚಂದ್ರಶೇಖರ್, ಪ್ರಾಂಶುಪಾಲ ಅನಂತ ಪದ್ಮನಾಭ, ಉಪನ್ಯಾಸಕರಾದ ಮುಕುಂದ್ ಕಿಶೋರ್ ಇದ್ದರು.
