ಕಳಸ:ಕಳಸದಿಂದ ಎಡದಾಳು ಸಂಪರ್ಕಿಸುವ ರಸ್ತೆಗೆ ಸ್ಥಳೀಯರು ತಮ್ಮ ಸ್ವಂತ ಭೂಮಿ ಬಿಟ್ಟು ಕೊಟ್ಟು 3 ದಶಕ ಕಳೆದಿದ್ದರೂ ರಸ್ತೆ ಅಭಿವೃದ್ಧಿಗೆ ಅನುದಾನ ಮರೀಚಿಕೆಯೇ ಆಗಿತ್ತು.ಆದರೆ ಶನಿವಾರ ಮುಗಿದ ರಸ್ತೆಯ ಮೊದಲ ಭಾಗದ ಕಾಂಕ್ರೀಟ್ ಕಾಮಗಾರಿ ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿಸಿದೆ.
ಸಂತೆಕಟ್ಟೆಯಿಂದ ಎಡದಾಳು ಸಂಪರ್ಕಿಸುವ ರಸ್ತೆ ತೀರಾ ಇಳಿಜಾರು ಆಗಿದ್ದು ಕಾಂಕ್ರೀಟೀಕರಣದ ಹೊರತಾಗಿ ಬೇರೆ ಆಯ್ಕೆ ಇರಲಿಲ್ಲ. ಆದರೆ ಕಳಸ ಪಟ್ಟಣದ ಸೆರಗಿನಲ್ಲೇ ಇದ್ದರೂ ಈ ರಸ್ತೆಗೆ ಈವರೆಗೂ ಸಣ್ಣ ಮಟ್ಟದ ನೆರವು ಬಿಟ್ಟರೆ ಬೇರೆ ಅನುದಾನ ಸಿಕ್ಕಿರಲಿಲ್ಲ.ಇದೀಗ 20 ಲಕ್ಷ ವೆಚ್ಚದಲ್ಲಿ ಈ ರಸ್ತೆಯ ಮೊದಲ ಭಾಗದ ಕಾಂಕ್ರೀಟೀಕರಣಕ್ಕೆ ಶಾಸಕಿ ನಯನಾ ಮೋಟಮ್ಮ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಿದ್ದರು.
ಕಳೆದ 3 ದಿನಗಳಿಂದ ನಡೆದ ರಸ್ತೆಯ ಕಾಂಕ್ರೀಟೀಕರಣದಲ್ಲಿ ಸ್ಥಳೀಯರು ಸಕ್ರಿಯವಾಗಿ ಪಾಲ್ಗೊಂಡು ಗುಣಮಟ್ಟದ ಕಾಮಗಾರಿ ನಡೆಯುವ ಬಗ್ಗೆ ನಿಗಾ ವಹಿಸಿದರು.ಒಂದಿಬ್ಬರು ಗ್ರಾಮಸ್ಥರು ಕಾಮಗಾರಿಯನ್ನು ಹದ್ದಿನಕಣ್ಣಿನಿಂದ ವೀಕ್ಷಿಸಿದರು. ಮತ್ತೊಬ್ಬರು ಕಾಂಕ್ರೀಟ್ ಮಿಶ್ರಣದ ಗುಣಮಟ್ಟ ಗಮನಿಸಿದರು.ಗುತ್ತಿಗೆದಾರ ಕೂಡ ಕಾಮಗಾರಿ ಬಗ್ಗೆ ಕಾಳಜಿ ತೋರಿದರು.
ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಗ್ರಾಮಸ್ಥರಾದ ದಿನೇಶ್, ಸುರೇಶ್, ಭೋಜೇಗೌಡ, ಮಹೇಶ್, ಪಂಚಾಯಿತಿ ಸದಸ್ಯ ವೀರೇಂದ್ರ, ಸಂತೋಷ್, ರಿಜ್ವಾನ್ ರಸ್ತೆ ಗುಣಮಟ್ಟ ಕಂಡು ಸಂತಸಪಟ್ಟರು.
ಈ ರಸ್ತೆ ಕಾಮಗಾರಿಯಿಂದ ಜೆಇಎಂ ಶಾಲಾ ಮಕ್ಕಳಿಗೆ, ಎಡದಾಳು ಗ್ರಾಮಸ್ಥರಿಗೆ ಅನುಕೂಲ ಆಗಲಿದೆ.ಎಡದಾಳು ರಸ್ತೆಯ ಉಳಿದ ಭಾಗಕ್ಕೂ ಕಾಂಕ್ರೀಟ್ ಕಾಮಗಾರಿ ನಡೆಸಿ ಕಳಸ-ಕಳಕೋಡು ರಸ್ತೆಗೆ ಸಂಪರ್ಕಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
